ಕೇಂದ್ರದಿಂದ ಬಂದ ನೆರೆ ಪರಿಹಾರ ಎಷ್ಟು? – ರಾಜ್ಯ ಸರಕಾರಕ್ಕೆ ಇಲ್ಲ ಸ್ಪಷ್ಟತೆ

Public TV
2 Min Read
blg flood

ಬೆಂಗಳೂರು: ಮೊನ್ನೆ ಕೇಂದ್ರ ಸರಕಾರವು ರಾಜ್ಯದ ನೆರೆ ಪರಿಸ್ಥಿತಿಗೆ ಘೋಷಿಸಿದ ಪರಿಹಾರ ಮೊತ್ತ 1869 ಕೋಟಿ ರೂಪಾಯಿಯೇ ಅಥವಾ 669 ಕೋಟಿ ರೂಪಾಯಿಯೇ? ಇಂಥದ್ದೊಂದು ಗೊಂದಲ ಈಗ ರಾಜ್ಯ ಸರಕಾರಕ್ಕೆ ಕಾಡುತ್ತಿದೆ. ಕೇಂದ್ರ ಸರಕಾರ ಎನ್‌ಡಿಆರ್‌ಎಫ್‌ ಅಡಿ ಘೋಷಿಸಿದ ಎರಡನೇ ಕಂತಿನ ಪರಿಹಾರ ಮೊತ್ತ ಕುರಿತು ಯಾವುದೇ ಸ್ಪಷ್ಟತೆ ಕೊಡದಿರವುದರಿಂದ ಈ ಗೊಂದಲ ಸೃಷ್ಟಿಯಾಗಿದೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉದ್ಭವಿಸಿ ಸುಮಾರು 22 ಜಿಲ್ಲೆಗಳಲ್ಲಿ ಸಾಕಷ್ಟು ಪ್ರಾಣ, ಆಸ್ತಿ, ಬೆಳೆ ನಷ್ಟ ಉಂಟಾಗಿತ್ತು. ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಸುಮಾರು 38 ಸಾವಿರ ಕೋಟಿ ರೂ ನಷ್ಟ ಪರಿಹಾರ ಕೊಡಬೇಕೆಂದು ವರದಿ ಸಲ್ಲಿಸಿತ್ತು. ರಾಜ್ಯದ ಮನವಿ ಬಂದ ಬಹಳ ದಿನಗಳವರೆಗೂ ಕಾಯಿಸಿದ ಕೇಂದ್ರ ಸರಕಾರ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಮೊದಲ ಕಂತಿನ ರೂಪದಲ್ಲಿ 1,200 ರೂ ಪರಿಹಾರ ಮೊತ್ತ ನೀಡಿತ್ತು. ಇದೀಗ ಮತ್ತೆ ಸರಿಸುಮಾರು ಅಷ್ಟೇ ಕಾಲಾವಕಾಶ ತಡೆದು ಎರಡನೇ ಕಂತಿನ ಪರಿಹಾರ ಮೊತ್ತವನ್ನು ಘೋಷಣೆ ಮಾಡಿದೆ.

flood

ಕೇಂದ್ರದ ಈ ಬಾರಿಯ ಪರಿಹಾರ ಮೊತ್ತ ಎಷ್ಟು ಅನ್ನುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟತೆ ಸಿಗುತ್ತಿಲ್ಲ. ಈಗಿನ ಪರಿಹಾರ ಮೊತ್ತ ಪ್ರತ್ಯೇಕವಾಗಿ ಘೋಷಿಸಲ್ಪಟ್ಟ 1,869 ಕೋಟಿಯೋ ಅಥವಾ ಮೊದಲ ಕಂತಿಗೆ ಸೇರ್ಪಡೆ ಮಾಡಲ್ಪಟ್ಟು ಘೋಷಣೆಯಾದ 1,869 ಕೋಟಿಯೋ ಎನ್ನುವುದರ ಕುರಿತು ಯಾವುದೇ ಸಮಜಾಯಿಷಿ ದೊರಕುತ್ತಿಲ್ಲ. ಮೊದಲ ಕಂತು ಮತ್ತು ಎರಡನೇ ಕಂತುಗಳಲ್ಲಿ ನೀಡಿದ ಪರಿಹಾರ ಮೊತ್ತ ಪ್ರತ್ಯೇಕ ಎನ್ನುವುದಾದರೆ, ಎರಡೂ ಒಟ್ಟು ಸೇರಿಸಿ ಒಟ್ಟು 3,069 ಕೋಟಿ ರೂ ಪರಿಹಾರ ರಾಜ್ಯಕ್ಕೆ ಬಂದಂತಾಗುತ್ತದೆ. ಆದರೆ ಮೊದಲ ಕಂತಿಗೆ ಸೇರಿಸಲ್ಪಟ್ಟು ಎರಡನೇ ಕಂತು ಬಿಡುಗಡೆ ಮಾಡಿದ್ದರೆ, ಆಗ ಎರಡನೇ ಕಂತಿನ ಪರಿಹಾರ ಮೊತ್ತ ಕೇವಲ 669 ಕೋಟಿ ರೂ. ಆಗಲಿದೆ. ಇದರಲ್ಲಿ ಸ್ಪಷ್ಟತೆ ಸಿಗುತ್ತಿಲ್ಲದಿರುವುದರಿಂದ ರಾಜ್ಯದ ಅಧಿಕಾರಿವರ್ಗ ಗೊಂದಲದಲ್ಲಿದೆ. ಎರಡನೇ ಕಂತಿನ ಪರಿಹಾರ ಮೊತ್ತ ಎಷ್ಟು ಎನ್ನುವುದರ ಬಗ್ಗೆ ಸ್ಪಷ್ಟತೆಯನ್ನು ಕೇಂದ್ರ ಸರ್ಕಾರದ ಬಳಿಯೇ ಕೇಳಿ ಬಗೆಹರಿಸಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗಿದೆ.

ಈ ಗೊಂದಲ ಮತ್ತು ಅನುಮಾನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಯೂ ಪುಷ್ಟಿ ಕೊಟ್ಟಿದೆ. ಕೇಂದ್ರ ಸರಕಾರ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಲಿರುವ ಪರಿಹಾರ ಮೊತ್ತ ಕಡಿಮೆ. ಈ ಮೊತ್ತ ನೆರೆ ಸ್ಥಿತಿ ಎದುರಿಸಲು ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಎರಡನೇ ಕಂತಿನ ಮೊತ್ತ 1,869 ಎಂದು ಎಲ್ಲರೂ ಕೇಂದ್ರದತ್ತ ಮೆಚ್ಚುಗೆ ನೋಟ ಹರಿಸಿರುವಾಗಲೇ ಮುಖ್ಯಮಂತ್ರಿಗಳ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕೇಂದ್ರದ ಎರಡನೇ ಪರಿಹಾರ ಕಂತು ಎಷ್ಟು ಅನ್ನುವ ಅನುಮಾನ ಹುಟ್ಟು ಹಾಕಿದೆ.

ಈ ಗೊಂದಲ ಬಗೆಹರಿಯಲು ಎರಡು ದಾರಿಗಳಿವೆ. ಮೊದಲ ಮಾರ್ಗ, ಎರಡನೇ ಕಂತು ಎಷ್ಟು ಎಂದು ಕೇಂದ್ರ ಸರಕಾರದ ಬಳಿಯೇ ರಾಜ್ಯ ಸರಕಾರ ಸ್ಪಷ್ಟೀಕರಣ ಕೇಳಬೇಕು. ಎರಡನೇ ಮಾರ್ಗ ಸದ್ಯ ಕೇಂದ್ರ ಸರಕಾರ ಘೋಷಣೆ ಮಾಡಿರುವ ಎರಡನೇ ಪರಿಹಾರ ಮೊತ್ತವನ್ನು ರಾಜ್ಯದ ಎನ್‌ಡಿಆರ್‌ಎಫ್‌ ಖಾತೆಗೆ ಹಾಕುವವರೆಗೂ ಕಾಯುವುದು. ಕೇಂದ್ರ ಪರಿಹಾರ ಮೊತ್ತ ರಾಜ್ಯದ ಖಾತೆಗೆ ಬಂದ ಬಳಿಕವೇ ಎರಡನೇ ಕಂತು ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *