Connect with us

Cricket

ಧೋನಿ ಅಣ್ಣನಂತೆ ನಿಂತು ಧೈರ್ಯ ಹೇಳಿದ್ದಕ್ಕೆ ಸಿಕ್ತು ಹ್ಯಾಟ್ರಿಕ್: ಕುಲದೀಪ್ ಯಾದವ್

Published

on

ಕೋಲ್ಕತ್ತಾ: ಹ್ಯಾಟ್ರಿಕ್ ವಿಕೆಟ್ ಪಡೆದು ಕಪೀಲ್ ದೇವ್ ಚೇತನ್ ಶರ್ಮಾರ ಸಾಲಿನಲ್ಲಿ ನಾನು ನಿಲ್ಲುವುದಕ್ಕೆ ನನ್ನ ಅಣ್ಣ ಸ್ಥಾನದಲ್ಲಿರುವ ಧೋನಿಯ ಸ್ಫೂರ್ತಿದಾಯಕ ಮಾತುಗಳೇ ಕಾರಣ ಎಂದು ಎಡಗೈ ಲೆಗ್‍ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಕುಲದೀಪ್ ಯಾದವ್, ಬೌಲಿಂಗ್ ಮಾಡುವಾಗ ಪದೇ ಪದೇ ವಿಫಲವಾಗುತ್ತಿದ್ದ ವೇಳೆ ನನಗೆ ಧೈರ್ಯ ತುಂಬಿದ್ದು ಧೋನಿ. ನಿನಗೆ ಯಾವ ರೀತಿ ಹಾಕಬೇಕು ಅದೇ ರೀತಿ ಹಾಕು. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡ. ಇದೇ ನನ್ನ ಹ್ಯಾಟ್ರಿಕ್ ವಿಕೆಟ್ ಪಡೆಯಲು ಸ್ಫೂರ್ತಿ ತುಂಬಿದ ಮಾತಾಗಿತ್ತು. ಪಂದ್ಯದ ಗತಿ ಬದಲಿಸಲು ಸಿಕ್ಕ ಅವಕಾಶ ದೊಡ್ಡದು. ಎಂದು ಕುಲದೀಪ್ ಯಾದವ್ ಧೋನಿಯನ್ನ ಹಾಡಿ ಹೊಗಳಿದ್ದಾರೆ.

ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ನನ್ನ ಈ ಸಾಧನೆಗೆ ಅಣ್ಣನ ರೀತಿ ನಿಂತು ಧೈರ್ಯ ನೀಡಿ ಸಹಕಾರ ನೀಡಿದ್ದಾರೆ. ನಾನು ಎರಡನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಹಲವಾರು ಬಾರಿ ಸರಿಯಾದ ಜಾಗಕ್ಕೆ ಬಾಲ್ ಹಾಕಲು ವಿಫಲನಾಗುತ್ತಿದ್ದೆ. ಬಳಿಕ ಅಣ್ಣ ಧೋನಿ ನನ್ನ ಬಳಿ ಬಂದು ಇದು ಆಟವಷ್ಟೇ. ಹೆಚ್ಚು ಒತ್ತಡಕ್ಕೆ ಒಳಗಾಗಬೇಡ ಕೂಲ್ ಆಗಿ ಬಾಲ್ ಮಾಡು. ನಿನಗೆ ಯಾವ ಜಾಗಕ್ಕೆ ಬಾಲ್ ಹಾಕಬೇಕು ಅನಿಸುತ್ತೆ ಹಾಗೇ ಮಾಡು ಎಂದು ಧೈರ್ಯ ತುಂಬಿದ್ದರು. ಹೀಗಾಗಿ ನಾನು ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ಹೊಗಳಿದ್ದಾರೆ.

ಕೇವಲ 252 ರನ್‍ಗೆ ಭಾರತ ಆಲ್‍ಔಟ್ ಆಗಿ ಸೋಲಿನ ಭೀತಿಯಲ್ಲಿಲ್ಲಿದ್ದ ಟೀ ಇಂಡಿಯಾಗೆ ಕೋಚ್‍ನ ರೀತಿಯಲ್ಲಿ ಧೊನಿ ಕೆಲಸ ಮಾಡುತ್ತಾರೆ. ಎಲ್ಲರಿಗೂ ಉತ್ತೇಜನ ನೀಡಿ ಪಂದ್ಯದ ಗತಿಯನ್ನು ಬದಲು ಮಾಡುವ ಶಕ್ತಿ ಧೋನಿಯವರ ಬಳಿ ಇದೆ ಎಂದು ಹೇಳಿದ್ದಾರೆ.

ಕುಲ್‍ದೀಪ್ ಯಾದವ್ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಧೋನಿ, ಈಡನ್ ಗಾರ್ಡನ್ ಸೃಷ್ಟಿಯಾದ ಮೈಲುಗಲ್ಲಿನ ಬಗ್ಗೆ ನಾನು ಕುಲದೀಪ್‍ಗೆ ಅಭಿನಂದನೆ ಸಲ್ಲಿಸುತ್ತೇನೆ. ಮ್ಯಾಥ್ಯು ವೆಡ್, ಅಸ್ಟನ್ ಅಗರ್ ಹಾಗೂ ಪ್ಯಾಟ್ ಕಮಿನ್ಸ್‍ರಂತಹ ಆಲ್‍ರೌಂಡರ್ ಆಟಗಾರರನ್ನ ಔಟ್ ಮಾಡಿ ಪೆವಲಿಯನ್ ಹಾದಿ ಹಿಡಿಯುವಂತೆ ಮಾಡಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿ 1987ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಚೇತನ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಜೊತೆಗೆ ಮಾಜಿ ನಾಯಕ ಕಪಿಲ್ ದೇವ್ 1991ರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಈಗ ಇವರ ಸಾಲಿನಲ್ಲಿ ಕುಲದೀಪ್ ಯಾದವ್ ನಿಂತಿದ್ದು, ಈಡನ್‍ಗಾರ್ಡ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಎರಡನೇ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.

ಕುಲದೀಪ್ ಯಾದವ್ 2014ರಲ್ಲಿ ಅಂಡರ್ 19 ವಿಶ್ವಕಪ್‍ನಲ್ಲಿ ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಸ್ಕಾಟ್‍ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದರು. ನಿನ್ನೆ ನಡೆದ ಪಂದ್ಯದಲ್ಲಿ ಕುಲದೀಪ್ ಎಸೆದ 33ನೇ ಓವರ್ ಪಂದ್ಯದ ದಿಕ್ಕನ್ನೇ ಬದಲಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದರಿಂದ 5 ಏಕದಿನ ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Click to comment

Leave a Reply

Your email address will not be published. Required fields are marked *

www.publictv.in