ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಬರೋಬ್ಬರಿ ಒಂದು ತಿಂಗಳು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಶಾಸಕ ಗಣೇಶ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ನಾಪತ್ತೆಯಾಗಿ ವಿವಿಧ ಪ್ರದೇಶಗಳಿಗೆ ತೆರಳಿದ್ದ ಶಾಸಕ ಗಣೇಶ್ ಸದ್ಯ ಗುಜರಾತ್ ಸೋಮನಾಥ ದೇವಾಲಯದ ಬಳಿ ಬಂಧನವಾಗಿದ್ದಾರೆ.
ಗಣೇಶ್ ಅವರ ಬಂಧನದ ಹಿಂದೆ ಹಲವು ಅನುಮಾನಗಳು ಮೂಡಿದ್ದು, ಇಷ್ಟು ದಿನ ಪೊಲೀಸರ ಕೈಗೆ ಸಿಗದೇ ಇದ್ದ ಗಣೇಶ್ ಬಂಧನ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಎದ್ದಿದೆ. ಬಿಡದಿ ಪೊಲೀಸರು 3 ತಂಡ ಮುಂಬೈ, ಅಂಡಮಾನ್, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣೇಶ್ ಅವರಿಗಾಗಿ ಹುಡುಕಾಟ ನಡೆಸಿತ್ತು.
Advertisement
Advertisement
ಎಷ್ಟೇ ಹುಡುಕಾಟ ನಡೆಸಿದರೂ ಒಂದು ತಿಂಗಳಿನಿಂದ ಶಾಸಕ ಗಣೇಶ್ ಅವರು ಪತ್ತೆಯಾಗಿರಲಿಲ್ಲ. ಆದರೆ ಕಳೆದ ವಾರದ ಹಿಂದೆ ಗಣೇಶ್ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದರು. ಈ ವೇಳೆ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಎಚ್ಚೆತ್ತ ಪೊಲೀಸ್ ತಂಡ ಬುಧವಾರ ಬೆಳಗ್ಗೆ 11.30ರ ವೇಳೆಗೆ ಶಾಸಕರನ್ನು ಬಂಧಿಸಿದೆ.
Advertisement
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಚ್ಚರಿ ಹೇಳಿಕೆ ಬಳಿಕ ಗಣೇಶ್ ಅವರ ಬಂಧನ ಆಗಿರುವುದು ಕೂಡ ಕುತೂಹಲ ಮೂಡಿಸಿದೆ. ರಮೇಶ್ ಅವರ ಬಳಗದಲ್ಲಿ ಗಣೇಶ್ ಅವರು ಕಾಣಿಸಿಕೊಂಡ ಕಾರಣದಿಂದ ಶಾಸಕ ಬಂಧನಕ್ಕೆ ಸರ್ಕಾರ ಮುಂದಾಯಿತೇ ಎಂಬ ಪ್ರಶ್ನೆಯೂ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಸಚಿವ ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿರುವ ಆನಂದ್ ಸಿಂಗ್ ಅವರು ಶಾಸಕ ಗಣೇಶ್ ಬಂಧನಕ್ಕೆ ಒತ್ತಡ ಹೇರಿದ್ದರು ಎನ್ನಲಾಗಿದೆ.
Advertisement
ಗಣೇಶ್ ಬಂಧನ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಆನಂದ್ ಸಿಂಗ್ ಅವರ ಸಹೋದರ ಪ್ರವೀಣ್ ಸಿಂಗ್, ನಮಗೆ ಆಗಿರುವ ಅನ್ಯಾಯಕ್ಕೆ ಶಿಕ್ಷೆ ಆಗಬೇಕಿದೆ. ನ್ಯಾಯಾಂಗ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದರು. ಅಲ್ಲದೇ ಇದೇ ವೇಳೆ ಸಂಧಾನ ಕುರಿತ ಪ್ರಶ್ನೆಗೆ ಉತ್ತರಿಸಿ, ಕುಟುಂಬ ಸದಸ್ಯರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಸಂಧಾನದ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv