10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

Public TV
5 Min Read
Coronavirus Hospital Wuhan Chian 7

ಕೊರೋನಾ ವೈರಸ್‍ಗೆ ತುತ್ತಾಗಿರುವ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಲು ಚೀನಾ ಸರ್ಕಾರ ಕೇವಲ 10 ದಿನದಲ್ಲಿ ಒಂದು ಮಹಡಿಯ ಆಸ್ಪತ್ರೆಯನ್ನು ತೆರೆದಿದ್ದು, ಸೋಮವಾರವಾದ ಇಂದು ಈ ಆಸ್ಪತ್ರೆಗೆ ರೋಗಿಗಳು ದಾಖಲಾಗುತ್ತಿದ್ದಾರೆ. ನಮ್ಮಲ್ಲಿ ಒಂದು ಆಸ್ಪತ್ರೆ ನಿರ್ಮಿಸಲು ಹಲವು ವರ್ಷಗಳು ಬೇಕಾಗಿರುವಾಗ ಚೀನಾದಲ್ಲಿ 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಸಾಧ್ಯ ಹೇಗೆ ಎನ್ನುವ ಪ್ರಶ್ನೆ ಹುಟ್ಟದೇ ಇರಲಾರದು. ಈ ಪ್ರಶ್ನೆಗೆ ಉತ್ತರ ಎನ್ನುವಂತೆ ಈ ಆಸ್ಪತ್ರೆ ವಿಶೇಷತೆ ಏನು? ಏನು ತಂತ್ರಜ್ಞಾನಗಳನ್ನು ಬಳಸಲಾಗಿದೆ ಮತ್ತು ಇದು ಚೀನಾದ ಜೈವಿಕ ಅಸ್ತ್ರವೇ ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ

ನಿರ್ಮಾಣವಾಗಿದ್ದು ಎಲ್ಲಿ?
ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕೇಂದ್ರ ಸ್ಥಾನ ವುಹಾನ್ ನಗರದ ಹುಶೋಶೆನ್ ನಲ್ಲಿ ಆಸ್ಪತ್ರೆ ನಿರ್ಮಾಣವಾಗಿದೆ. ಇದರ ಜೊತೆ ಚೀನಾ ಸರ್ಕಾರ 1500 ಬೆಡ್ ಸೌಲಭ್ಯ ಇರುವ ಮತ್ತೊಂದು ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು ಈ ವಾರದಲ್ಲಿ ಇದು ರೋಗ ಪೀಡಿತರಿಗೆ ತೆರೆಯಲಿದೆ.

Coronavirus Hospital Wuhan Chian 1

ಆಸ್ಪತ್ರೆ ನಿರ್ಮಿಸಿದ್ದು ಹೇಗೆ?
ದಿನದ 24 ಗಂಟೆ 3 ಶಿಫ್ಟ್ ಗಳಲ್ಲಿ 7 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿ 60 ಸಾವಿರ ಚದರ ಮೀಟರ್ ವಿಸ್ತೀರ್ಣದ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಮೊದಲೇ ನಿರ್ಮಾಣಗೊಂಡ ಕಾಂಕ್ರೀಟ್ ಗೋಡೆಗಳನ್ನು ಬಳಸಿಕೊಂಡು ವುಹಾನ್ ಸ್ಥಳೀಯ ಆಡಳಿತದ ಚೀನಾದ ಸೇನೆಯ ಸಹಕಾರವನ್ನು ಪಡೆದು ಈ ಆಸ್ಪತ್ರೆ ನಿರ್ಮಿಸಿದೆ. ಈ ಕಾಂಕ್ರೀಟ್ ಗೋಡೆಗಳು ಹಡಗಿನ ಕಂಟೈನರ್ ಮಾದರಿಯಲ್ಲಿದ್ದು ರೈಲು ಮತ್ತು ಲಾರಿಗಳ ಮೂಲಕ ಸ್ಥಳಕ್ಕೆ ತರಲಾಗಿದೆ. ಬಳಿಕ ಕ್ರೇನ್ ಮೂಲಕ ಇವುಗಳನ್ನು ಜೋಡಿಸಲಾಗಿದೆ. ಕಾರ್ಮಿಕರಿಗೆ ಸಾಮಾನ್ಯಕ್ಕಿಂತ 3 ಪಟ್ಟು ಹೆಚ್ಚು ವೇತನ ನೀಡಲಾಗಿದೆ ಎಂದು ವರದಿಯಾಗಿದೆ. ಕೊರೋನಾ ನಿಯಂತ್ರಣ ಕ್ರಮಗಳಿಗಾಗಿ ಚೀನಾ ಅಭಿವೃದ್ಧಿ ಬ್ಯಾಂಕ್ 2061 ಕೋಟಿ ರೂ. ತುರ್ತು ಸಾಲ ನೀಡಿದೆ. ಹೊಸ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು, ನರ್ಸ್, ಇತರೇ ಸಿಬ್ಬಂದಿ ಸೇರಿದಂತೆ ಒಟ್ಟು 1,500 ಜನರ ತಂಡವನ್ನು ಚೀನಾ ಸರ್ಕಾರ ಕಳುಹಿಸಿಕೊಟ್ಟಿದೆ.

Coronavirus Hospital Wuhan Chian 2

ದಿಢೀರ್ ಆಸ್ಪತ್ರೆ ಯಾಕೆ?
ಕೊರೋನಾ ವೈರಾಣು ಮೊದಲು ಪತ್ತೆಯಾದ ವುಹಾನ್ ನಗರ ಈಗ ಸಂಪೂರ್ಣ ಸ್ತಬ್ಧವಾಗಿದ್ದು, ಜೈಲಿನಂತಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಮನೆಯಿಂದ ಹೊರಬರಬೇಡಿ ಎಂಬ ಸೂಚನೆ ನೀಡಲಾಗಿದೆ. ಚೀನಾದಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಕೊರೋನಾಗೆ ತುತ್ತಾಗಿರುವುದು ಅಧಿಕೃತವಾಗಿ ಪ್ರಕಟವಾಗಿದ್ದು ಈಗಾಗಲೇ 361 ಜನ ಮೃತಪಟ್ಟಿದ್ದಾರೆ. ವೇಗವಾಗಿ ಹರಡುತ್ತಿದ್ದು ವಿಶ್ವದ 27 ರಾಷ್ಟ್ರಗಳಲ್ಲಿ ಕೊರೋನಾ ವ್ಯಾಪಿಸಿದೆ. ದಿನೇ ದಿನೇ ರೋಗ ಬಾಧಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಜೊತೆಗೆ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಈಗ ದಿಢೀರ್ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ.

ಆಸ್ಪತ್ರೆಯ ವಿಶೇಷತೆ ಏನು?
ನಿರ್ಮಾಣಗೊಂಡ ಆಸ್ಪತ್ರೆಯಲ್ಲಿ ಅರ್ಧಕ್ಕೂ ಹೆಚ್ಚು ಪ್ರತ್ಯೇಕ ವಾರ್ಡ್ ಗಳಿದ್ದು 30ಕ್ಕೂ ಹೆಚ್ಚು ತುರ್ತು ಚಿಕಿತ್ಸಾ ಘಟಕ ಹೊಂದಿದೆ. ಇಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸಲಹೆ ಸೂಚನೆ ನೀಡಲು ತಜ್ಞರ ವೈದ್ಯರ ಜೊತೆ ಸಂವಹನ ಸಾಧಿಸಲು 12 ಗಂಟೆಯ ಅವಧಿಯೊಳಗೆ ವುಹಾನ್ ಟೆಲಿಕಾಂ ಲಿಮಿಟೆಡ್ ನ 20 ಮಂದಿ ಕಮಾಂಡೋ ತಂಡ ವಿಡಿಯೋ ಸಿಸ್ಟಂ ಅಳವಡಿಸಿದೆ. ಈ ಲಿಂಕ್ ಮೂಲಕ ಬೀಜಿಂಗ್ ನಲ್ಲಿರುವ ಪಿಎಲ್‍ಎ ಜನರಲ್ ಆಸ್ಪತ್ರೆಯ ವೈದ್ಯರ ಜೊತೆ ನೇರವಾಗಿ ವಿಡಿಯೋ ಮೂಲಕ ಮಾತನಾಡಬಹುದಾಗಿದೆ.

Coronavirus Hospital Wuhan Chian 3

10 ದಿನದಲ್ಲೇ ಹೇಗೆ?
ಚೀನಾದಲ್ಲಿರುವುದು ಕಮ್ಯೂನಿಸ್ಟ್ ಸರ್ಕಾರ. ಕಟ್ಟಡ ನಿರ್ಮಾಣ ಮಾಡುತ್ತಿರುವ ಕಂಪನಿಗಳು ಸರ್ಕಾರದ್ದೇ ಆಗಿದೆ. ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಇರುತ್ತದೆ. ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರಿ ಯೋಜನೆಗಳು ಆರಂಭಗೊಂಡಾಗ ಕೋರ್ಟ್ ಮೊರೆ ಹೋಗಬಹುದಾಗಿದೆ. ಚೀನಾದಲ್ಲಿ ಸರ್ಕಾರ ಯೋಜನೆ ಕೈಗೆತ್ತಿಕೊಂಡರೆ ಅದಕ್ಕೆ ವಿರೋಧಿಸುವಂತಿಲ್ಲ. 2002 ರಲ್ಲಿ ಸಾರ್ಸ್ ರೋಗ ಬಂದ ನಂತರ ಚೀನಾ ಸರ್ಕಾರ ಎಚ್ಚೆತ್ತುಕೊಂಡಿತ್ತು. ವಿಶ್ವದ ಟಾಪ್ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಮೂಲಸೌಕರ್ಯ ವಿಚಾರದಲ್ಲಿ ಚೀನಾವೇ ನಂಬರ್ 1. ಹಲವು ದಶಕಗಳಿಂದ ಚೀನಾದಲ್ಲಿ ದೊಡ್ಡ ದೊಡ್ಡ ಕಾಮಗಾರಿಗಳು ನಡೆಯುತ್ತಲೇ ಇದೆ. ಹೀಗಾಗಿ ಅಲ್ಲಿನ ಕಾರ್ಮಿಕರು ಮತ್ತು ಸೈನಿಕರು ಈ ವಿಚಾರದಲ್ಲಿ ತುಂಬ ಅನುಭವಿಗಳಾಗಿದ್ದಾರೆ. 1.20 ಲಕ್ಷ ಕಿ.ಮೀ ಉದ್ದದ ರೈಲ್ವೇ ಜಾಲವನ್ನು ಹೊಂದಿದೆ. ಹಲವು ನಗರಗಳಲ್ಲಿ ಬುಲೆಟ್ ರೈಲುಗಳು ಸಂಚರಿಸುತ್ತಿವೆ. ಹೀಗಾಗಿ ದೇಶದ ಯಾವುದೇ ಮೂಲೆಯಿಂದ ವಸ್ತುಗಳನ್ನು ಬಹಳ ವೇಗವಾಗಿ ಸಾಗಿಸುವ ಸಾಮರ್ಥ್ಯ ಚೀನಾಕ್ಕಿದೆ.

ಇದೇ ಮೊದಲಲ್ಲ:
2003 ರಲ್ಲಿ ಸಾರ್ಸ್ ಬಂದಾಗ ಚೀನಾ ಸರ್ಕಾರ 7 ದಿನದಲ್ಲಿ ಆಸ್ಪತ್ರೆ ನಿರ್ಮಿಸಿತ್ತು. ಮಿಲಿಟರಿಯಲ್ಲಿ ಪವರ್ ಫುಲ್ ರಾಷ್ಟ್ರವಾಗಿರುವ ಚೀನಾ ಒಂದು ವೇಳೆ ಯುದ್ಧ ಅಥವಾ ಸಾರ್ಸ್, ಕೊರೋನಾದಂತಹ ವೈರಸ್ ಬಂದಾಗ ಜನರನ್ನು ರಕ್ಷಿಸಲು ಮೊದಲೇ ಸಿದ್ಧತೆಗಳನ್ನು ಮಾಡಿಕೊಂಡಿರುತ್ತದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತದೆ.

Coronavirus Hospital Wuhan Chian 4

ವುಹಾನ್ ವಿಶೇಷತೆ ಏನು?
ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.

ಚೀನಾವೇ ಸೃಷ್ಟಿಸಿದ ವೈರಸ್?
ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿ ಈಗ ಚೀನಾವೇ ಈ ವೈರಸ್ ಸೃಷ್ಟಿ ಮಾಡಿತೇ ಎನ್ನುವ ಶಂಕೆ ಎದ್ದಿದೆ. ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಎಂಬ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೋನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪೀಡಿತರಾಗಿದ್ದಾರೆ.

ವೈರಾಲಾಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್ ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಭಾರತದಲ್ಲಿ ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿರುವುದು ವಿಶೇಷ.

Share This Article
Leave a Comment

Leave a Reply

Your email address will not be published. Required fields are marked *