ರಿಯಾದ್: ಸೌದಿ ಅರೇಬಿಯಾದ (Saudi Arabia) ಮೇಲೆ ಹೌತಿ (Houthi) ಬಂಡುಕೋರರು ದಾಳಿ ನಡೆಸಿದ್ದು, ತೈಲ ಘಟಕಗಳು ಹೊತ್ತಿ ಉರಿದಿವೆ. ಈ ದಾಳಿಯಿಂದ ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು 73 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಲ್ಕಿ, ಅಭಾ, ಜಜಾನ್, ನಜ್ರಾನ್ ಮತ್ತು ಖಾಮಿಸ್ ಮುಷೈತ್ ನಗರದ ಮೇಲೆ ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ-ಇರಾನ್ ಸಂಘರ್ಷ ತೀವ್ರ – ಶತಕದತ್ತ ಕಚ್ಚಾ ತೈಲ ದರ
ಈ ದಾಳಿಯಿಂದ ಸೌದಿ ಅರೇಬಿಯಾದ ದಕ್ಷಿಣ ಭಾಗದಲ್ಲಿರುವ ಬಹು ತೈಲ ಘಟಕಗಳು ಹೊತ್ತಿ ಉರಿದಿವೆ. ಈ ದಾಳಿಯಿಂದ ಉಂಟಾದ ಹಾನಿಯ ಬಗ್ಗೆ ಅಧಿಕಾರಿಗಳು ವಿವರ ನೀಡಿಲ್ಲ. ಈ ದಾಳಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೌದಿ ಅರೆಬಿಯಾ ಎಚ್ಚರಿಸಿದೆ. ಈ ಬೆಳವಣಿಗೆ ನಡುವೆ ಹೌತಿ ಬಂಡುಕೋರರು ಸೌದಿಯ ಮೇಲೆ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಯೆಮೆನ್ ಮೇಲಿನ ದಾಳಿಗೆ ಪ್ರತಿಕಾರ
ಯೆಮೆನ್‌ನ ಉತ್ತರ ಜಾಫ್ ಪ್ರಾಂತ್ಯದ ಜೈಲಿನ ಮೇಲೆ ಸೌದಿ ಅರೇಬಿಯಾ ವೈಮಾನಿಕ ದಾಳಿ ನಡೆಸಿದೆ ಎಂದು ಬಂಡುಕೋರರು ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಸೌದಿ ಮೇಲೆ ಹೌತಿ ದಾಳಿ ನಡೆದಿದೆ.
ಹಝೆಮ್ ನಗರದ ಜೈಲಿನ ಮೇಲೆ ದಾಳಿ ಸೌದಿಯಿಂದ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದರು. ಇತರ ಏಳು ಜನರು ಗಾಯಗೊಂಡಿದ್ದರು ಎಂದು ಹೌತಿಗಳು ಹೇಳಿಕೊಂಡಿದ್ದಾರೆ.
ಯೆಮೆನ್‌ನ ಅಂತರ್ಯುದ್ಧ
2014 ರಲ್ಲಿ ಹೌತಿ ಪಡೆಗಳು ರಾಜಧಾನಿ ಸನಾವನ್ನು ವಶಪಡಿಸಿಕೊಂಡಿದ್ದವು. ಬಳಿಕ ಉತ್ತರ ಯೆಮೆನ್‌ನ ಹೆಚ್ಚಿನ ಭಾಗಗಳನ್ನು ಹೌತಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
2015 ರಲ್ಲಿ, ಸೌದಿ ನೇತೃತ್ವದ ಒಕ್ಕೂಟವು ಯೆಮನ್‌ನಲ್ಲಿ (Yemen) ಸರ್ಕಾರವನ್ನು ಪುನಃಸ್ಥಾಪಿಸಲು ಮತ್ತು ಹೌತಿಗಳನ್ನು ಹಿಮ್ಮೆಟ್ಟಿಸಲು ಹಸ್ತಕ್ಷೇಪ ಮಾಡಿತ್ತು. ಇದಾದ ಬಳಿಕ ಅಲ್ಲಿನ ಅಂತರ್ಯುದ್ಧ ಹೆಚ್ಚಾಗಿತ್ತು. ಈ ವರ್ಷದ ಆರಂಭದಲ್ಲಿ ಯೆಮೆನ್ ಜೊತೆಗಿನ ಸಂಬಂಧದಲ್ಲಿ ಬಿರುಕು ಬಂದಿದ್ದರಿಂದ ಯುಎಇ ಯೆಮೆನ್‌ನಿಂದ ಹಿಂದೆ ಸರಿದಿತ್ತು. ಇದನ್ನೂ ಓದಿ: ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ; ಪತಿ ಬಿಡುಗಡೆಗಾಗಿ ಮೋದಿಗೆ ವಿಡಿಯೋ ಮೂಲಕ ಪತ್ನಿ ಮನವಿ
