– ಶಿಡ್ಲಘಟ್ಟ ಪಟ್ಟಣದ ರಾಜೀವ್ ಗಾಂಧಿ ಬಡಾವಣೆ ಜನರ ಗೋಳು
– ಮದುವೆ ಆಗಲ್ಲವೆಂದು ಮನೆಯನ್ನೇ ಖಾಲಿ ಮಾಡಿದ್ರು
ಚಿಕ್ಕಬಳ್ಳಾಪುರ: ಮದುವೆ ಆಗೋಕೆ ಮುಂಚೆ ಮನೆ ನೋಡೋಕೆ ವಧುವಿನ ಕಡೆಯವರು ಬರುತ್ತಾರೆ. ಆದರೆ ನಮ್ಮ ಮನೆ, ನಮ್ಮ ಬಡಾವಣೆ ನೋಡಿದರೆ ಹೆಣ್ಣು ಕೊಡಬೇಕು ಅಂತ ಬಂದವರು ನಂತರ ನಮ್ಮ ಮನೆಯತ್ತ ತಿರುಗಿಯೂ ನೋಡುವುದಿಲ್ಲ ಎಂಬುದು ಈ ಬಡಾವಣೆಯ ಯುವಕರ ಗೋಳು.
Advertisement
ಶಿಡ್ಲಘಟ್ಟ ನಗರ ಹೊರವಲಯದ ರಾಜೀವ್ ಗಾಂಧಿ ಆಶ್ರಯ ಬಡಾವಣೆಯ ಜನರ ಗೋಳು ಇದಾಗಿದ್ದು, ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ದಶಕದ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೂರಾರು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ದಶಕ ಕಳೆದರೂ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕುಡಿಯುವ ನೀರು, ಸಮರ್ಪಕ ಚರಂಡಿ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಅಲ್ಲಿನ ನಿವಾಸಿಗಳನ್ನು ಕಾಡುತ್ತಿವೆ.
Advertisement
Advertisement
ವಿಧಿಯಿಲ್ಲದೆ ಕೆಲವರು ಬಾಗಿಲು ತೆಗೆದು ಇದೇ ಮನೆಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಉಳಿದಂತೆ ಬಹುತೇಕ ಮನೆಗಳಿಗೆ ಬೀಗ ಜಡಿದು ಹಲವರು ನಗರ ಸೇರಿಕೊಂಡಿದ್ದಾರೆ. ನಗರದಿಂದ 5 ಕಿ.ಮೀ. ದೂರದಲ್ಲಿರುವ ಬೆಂಗಾಡಿನ ರೀತಿಯ ಈ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಕುಟುಂಬಗಳ ಯುವಕರಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಾರಂತೆ.
Advertisement
ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳೇ ಇಲ್ಲ. ಇಂತಹ ವಾತಾವರಣದಲ್ಲಿರುವವರಿಗೆ ಹೇಗೆ ಹೆಣ್ಣು ಕೊಡುವುದು ಎಂದು ಹೆಣ್ಣಿನ ಕಡೆಯವರು ಪ್ರಶ್ನಿಸುತ್ತಾರೆ. ಆಶ್ರಯ ಬಡಾವಣೆಯ ಎದುರಲ್ಲೇ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಗಳಿದ್ದು, ಅಲ್ಲಿಂದ ಬರುವ ಕೆಟ್ಟ ವಾಸನೆಯಿಂದ ಜನ ನಿತ್ಯ ನರಕ ನೋಡುವಂತಾಗಿದೆ.
ಅಲ್ಲದೆ ನಮ್ಮ ಸಂಬಂಧಿಕರು ಸಹ ಮನೆಗಳಿಗೆ ಬರದಂತಾಗಿದ್ದಾರೆ. ಈ ಮೂಲಕ ಬಡವರಿಗೆ ಮನೆ ಕಟ್ಟಿಕೊಟ್ಟರೂ ಇದು ಪ್ರಯೋಜನವಿಲ್ಲದಂತಾಗಿದೆ. ನಗರಸಭೆಯವರು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ ಆಶ್ರಯ ಬಡಾವಣೆಯ ಬಡವರು ಇದ್ದ ಸೂರನ್ನು ಬಿಟ್ಟು ಪಟ್ಟಣದ ಬಾಡಿಗೆ ಮನೆಗಳಿಗೆ ತೆರಳಿ ನೆಲಸುವಂತಾಗಿದೆ.