ಅಪಘಾತಕ್ಕೂ ಮುನ್ನ 18,730 ರೂ. ಮದ್ಯ ಕುಡಿದಿದ್ದ ಮಿಹಿರ್‌ ಶಾ – ಮಗ ಮಾಡಿದ ತಪ್ಪಿಗೆ ತಂದೆಗೆ ಜೈಲು!

Public TV
2 Min Read
Sena Leader

ಮುಂಬೈ: ಬಿಎಂಡಬ್ಲ್ಯೂ ಹಿಟ್‌ ಅಂಡ್‌ ರನ್‌ ಕೇಸ್‌ನ (BMW Hit And Run Case) ಪ್ರಮುಖ ಆರೋಪಿ ಶಿಂಧೆ ಬಣದ ನಾಯಕ ರಾಜೇಶ್ ಶಾ (Rajesh Shah) ಅವರ ಪುತ್ರ ಮಿಹಿರ್ ಶಾ 15,000 ರೂ. ಪಾವತಿಸಿ ತಾತ್ಕಾಲಿಕ ಷರತ್ತುಬದ್ಧ ಜಾಮೀನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಆತ ದೇಶ ತೊರೆಯದಂತೆ ಸೂಚನೆ ನೀಡಲಾಗಿದೆ. ಈ ನಡುವೆ ಪ್ರಕರಣದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಸಾವಿರಾರು ರೂ.ಗೆ ಮದ್ಯ ಕುಡಿದಿದ್ದ:
ರಸ್ತೆ ಅಪಘಾತ ಸಂಭವಿಸುವುದಕ್ಕೂ ಮುನ್ನ ಪ್ರಮುಖ ಆರೋಪಿ ಮಿಹಿರ್‌ ಶಾ (Mihir Shah) ಮದ್ಯ ಕುಡಿದಿದ್ದ ಎಂದು ತಿಳಿದುಬಂದಿದೆ. ಅದಕ್ಕೆ ಪೂರಕ ಸಾಕ್ಷ್ಯವೂ ಲಭ್ಯವಾಗಿದೆ. ಮುಂಬೈನ ಜುಹುದಲ್ಲಿರುವ ಬಾರ್‌ವೊಂದರಲ್ಲಿ (Bar) 18,730 ರೂ.ನಷ್ಟು ಬಿಲ್‌ (Liquor Bill) ಮಾಡಿದ್ದಾನೆ. ಇದನ್ನೂ ಓದಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ ನೀಡೋದು ಸರ್ಕಾರದ ನೀತಿಯ ವಿಷಯ- ವಿಚಾರಣೆ ನಡೆಸಲು ಸುಪ್ರೀಂ ನಕಾರ

mumbai BMW accident women died

ಪೊಲೀಸರಿಗೆ (Mumbai Police) ದೊರೆತ ಪ್ರಾಥಮಿಕ ಮಾಹಿತಿ ಪ್ರಕಾರ, ಮಿಹಿರ್‌ ಶಾ ಶನಿವಾರ ತಡರಾತ್ರಿವರೆಗೂ ಜುಹುವಿನ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾನೆ. ಆತ ಬಾರ್‌ನಿಂದ ಹೊರಬರುತ್ತಿದ್ದಂತೆ, ಚಾಲಕ ಆತನನ್ನ ಕರೆದೊಯ್ಯುತ್ತಿದ್ದ. ಆದ್ರೆ ಮಾರ್ಗಮಧ್ಯದಲ್ಲಿ ಮಿಹಿರ್‌ ಶಾ ಹಠ ಹಿಡಿದು ತಾನೇ ಡ್ರೈವಿಂಗ್‌ ಮಾಡಲು ಮುಂದಾಗಿದ್ದಾನೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ. ಈ ವೇಳೆ ಅದೇ‌ ಮಾರ್ಗವಾಗಿ ಮೀನು ವ್ಯಾಪಾರಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಮಿಹಿರ್‌ ಶಾ ಬೈಕ್‌ಗೆ ಗುದ್ದಿದ ರಭಸಕ್ಕೆ ಪತಿ ಕೆಳಗೆ ಬಿದ್ದಿದ್ದಾನೆ. ಮಹಿಳೆ ಕೆಳಗೆ ಬಿದ್ದಾಗ ಕಾರಿನ ಚಕ್ರಕ್ಕೆ ಸಿಕ್ಕಿಕೊಂಡಿದ್ದರೂ, ಆತ ನೋಡದೇ ಎಳೆದೊಯ್ದಿದ್ದಾನೆ. ಪತಿ ಹಿಂದೆಯೇ ಕಾರು ನಿಲ್ಲಿಸುವಂತೆ ಕಾರಿನ ಹಿಂದೆಯೇ ಸ್ವಲ್ಪ ದೂರ ಓಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾರು ನಿಲ್ಲಿಸಿ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೂ ಚಿಕಿತ್ಸೆ ನೀಡುವುದಕ್ಕೂ ಮುನ್ನವೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸ ಕ್ರಿಮಿನಲ್‌ ಕಾನೂನುಗಳ ಅಡಿ ಕೊಲೆ ಅಪರಾಧ, ನರಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಡ್ರಂಕ್‌ ಅಂಡ್‌ ಡ್ರೈವ್‌, ವೇಗದ ಚಾಲನೆ, ಸಾಕ್ಷ್ಯ ನಾಶಪಡಿಸುವಿಕೆ, ಮೋಟಾರು ವಾಹನ ಕಾಯ್ದೆಗಳ ಅಡಿಯಲ್ಲೂ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಅಪಘಾತಕ್ಕೀಡಾದ ಕಾರು ಮಿಹಿರ್‌ ಶಾ ಹೆಸರಿನಲ್ಲೇ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರ ದಾಳಿ – 2 ದಿನಗಳಲ್ಲಿ 2ನೇ ಅಟ್ಯಾಕ್‌!

ಮಗ ಮಾಡಿದ ತಪ್ಪಿಗೆ ಅಪ್ಪನಿಗೆ ಜೈಲು:
ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಮಗ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂಬ ಆರೋಪದಲ್ಲಿ ಮಿಹಿರ್ ಶಾ ಅವರ ತಂದೆ ಹಾಗೂ ಅವರ ಕಾರು ಚಾಲಕ ಇಬ್ಬರನ್ನೂ ಬಂಧಿಸಲಾಗಿದೆ. ಘಟನೆ ಬಳಿಕ ಮಿಹಿರ್‌ ತನ್ನ ತಂದೆಗೆ ಕರೆ ಮಾಡಿ ಅಪಘಾತದ ಬಗ್ಗೆ ತಿಳಿಸಿದ್ದಾನೆ. ಅಂದಿನಿಂದ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಸೋಮವಾರ ರಾಜೇಶ್‌ ಶಾರನ್ನ ಮುಂಬೈ ಸಿಟಿ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್‌ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ, ನಂತರ ಅವರನ್ನು ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: BMW ಡಿಕ್ಕಿ ಹೊಡೆದು ಮಹಿಳೆ ಸಾವು – ಸಿಎಂ ಏಕನಾಥ್‌ ಶಿಂಧೆ ಬಣದ ನಾಯಕನ ಪುತ್ರ ಆರೋಪಿ

Share This Article