ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದು, ಹಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಕೇಳಿದ ನೇರಾ-ನೇರ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರ ನೀಡಿದ್ದಾರೆ.
ಪ್ರಶ್ನೆ: ಯಡಿಯೂರಪ್ಪ ಬದಲಾಗಿದ್ದಾರೆ?
ಬಿಎಸ್‍ವೈ: ಇವತ್ತಿನ ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿದ್ದರಿಂದ ಕೋಪವನ್ನು ತೊರೆದು ಶಾಂತ ಸ್ವಭಾವ ಬೆಳಸಿಕೊಂಡಿದ್ದೇನೆ. ನನ್ನ ಸ್ವಭಾವ ಮುಂದಿನ ದಿನಗಳಲ್ಲಿ ಒಳಿತು ಮಾಡಲಿದೆ.
Advertisement
ಪ್ರಶ್ನೆ: 2013ರ ಚುನಾವಣೆಯ ನೆನಪುಗಳನ್ನು ಮರೆತು ಮತ್ತೆ ಪಕ್ಷಕ್ಕೆ ಯಡಿಯೂರಪ್ಪ ಒಗ್ಗಿಕೊಂಡ್ರಾ?
ಬಿಎಸ್‍ವೈ: 2013ರಲ್ಲಿ ಐದು ವರ್ಷದ ನಂತರ ಇಂದು ಯಡಿಯೂರಪ್ಪ ಹೀಗೆ ಇರ್ತಾರಾ ಅಂತಾ ಖುದ್ದು ನಾನೇ ಕಲ್ಪನೆ ಮಾಡಿಕೊಂಡಿರಲಿಲ್ಲ. ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನನ್ನ ಮೇಲೆ ಅದಮ್ಯವಾದ ವಿಶ್ವಾಸವನ್ನಿಟ್ಟು ಪಕ್ಷದ ಅಧ್ಯಕ್ಷ ಮತ್ತು ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ರು. ಇಂದು ನಾನು ಅವರ ನಂಬಿಕೆಯನ್ನು ಸತ್ಯಮಾಡಲು ಹೊರಟಿದ್ದೇನೆ.
Advertisement
Advertisement
ಪ್ರಶ್ನೆ: ಇಂದು ಟಿಕೆಟ್ ಸಿಗದೇ ಅಸಮಾಧಾನಗೊಂಡ ಅಭ್ಯರ್ಥಿಗಳಿಗೆ ನಿಮ್ಮ ಉತ್ತರವೇನು?
ಬಿಎಸ್‍ವೈ: ಕೆಜೆಪಿ ಬಗ್ಗೆ ಪ್ರಶ್ನೆ ಇಂದು ಹುಟ್ಟಿಕೊಳ್ಳುವುದಿಲ್ಲ. ಕೆಜೆಪಿಯಲ್ಲಿ ಇದ್ದವನಿಗೆ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿದ್ದರಿಂದ ಈ ಪ್ರಶ್ನೆ ಬರಲ್ಲ. ಈ ಬಾರಿ ವಿಶೇಷವಾಗಿ ಎರಡ್ಮೂರು ಸಮೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ನಾನು ಯೋಚನೆ ಮಾಡಿದ ಹಾಗೆ ಶೇ.90ರಷ್ಟು ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ.
Advertisement
ಪ್ರಶ್ನೆ: ಇತ್ತೀಚೆಗೆ ಕೆಲವು ಸಮೀಕ್ಷೆಗಳ ಪ್ರಕಾರ ಬಿಜೆಪಿ ನೂರರ ಗಡಿ ದಾಟ್ತಿಲ್ಲ ಯಾಕೆ?
ಬಿಎಸ್‍ವೈ: ಇಂದು ನಾನು ಹೇಳುತ್ತಿದ್ದೇನೆ ನಮ್ಮದು ಮಿಷನ್ 150. ಈವಾಗ್ಲೂ ನಾವು 150 ಸೀಟ್ ಗೆಲ್ಲುತ್ತೇವೆ. ಇನ್ನೂ ಅಭ್ಯರ್ಥಿಗಳ ಘೋಷಣೆಯಾಗದೇ ಇರುವ ಸ್ಥಿತಿಯಲ್ಲಿ ಸಮೀಕ್ಷೆಗಳು ನಡೆದಿವೆ. ಇದಕ್ಕೆ ಉತ್ತರ ಮೇ 15ರಂದು ಸಿಗಲಿದೆ.
ಪ್ರಶ್ನೆ: ಈ ಬಾರಿ ಜನರು ಯಡಿಯೂರಪ್ಪ ಅವರಿಗೆ ಮತ ಏಕೆ ನೀಡ್ಬೇಕು?
ಬಿಎಸ್‍ವೈ: ನಾವು ಅಧಿಕಾರ ಬಂದ ಮೇಲೆ ನಮ್ಮ ಮೊದಲ ಆದ್ಯತೆ ನಾಡಿನ ರೈತರು ಮತ್ತು ನೀರಾವರಿ ಅಭಿವೃದ್ಧಿ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು, ರೈತರ ಜಮೀನಿಗೆ ನೀರಿನ ಸೌಲಭ್ಯ ಒದಗಿಸುವುದು. ಕೈಗಾರಿಕೆಗಳಿಗೆ ವಿದ್ಯುತ್ ಕಡಿಮೆಯಾದ್ರೆ, ರೈತರಿಗೆ 12 ಗಂಟೆ ವಿದ್ಯುತ್ ನೀಡುವುದು ನನ್ನ ಸಂಕಲ್ಪ. ರಾಜ್ಯದ ಜನರು ಸಿದ್ದರಾಮಯ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಾಂಗ್ರೆಸ್ ನಾಯಕರಲ್ಲಿಯೇ ಹೊಂದಾಣಿಕೆ ಇಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಎಲ್ಲೆ ನಿಂತ್ರೂ ಸೋಲುವುದು ಗ್ಯಾರಂಟಿ ಅಂದ್ರು.
ಪ್ರಶ್ನೆ: ವೀರಶೈವ ಲಿಂಗಾಯತ ವಿವಾದ ಬಿಜೆಪಿಗೆ ತಿರುಗು ಬಾಣವಾಗುವ ಸಾಧ್ಯತೆ ಇದೆನಾ?
ಬಿಎಸ್‍ವೈ: ಇದೂವರೆಗೂ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಇದೂವರೆಗೂ ಯಾರು ಸಹ ಲಿಂಗಾಯತ ಧರ್ಮದ ಬಗ್ಗೆ ಪ್ರಶ್ನೆ ಕೇಳಿಲ್ಲ. ಆದ್ರೆ ಕಾಂಗ್ರೆಸ್ 55 ರಿಂದ 60 ಸೀಟ್ ಮಾತ್ರ ಗೆಲ್ಲಲಿದೆ.
ಪ್ರಶ್ನೆ: ಜೆಡಿಎಸ್ ಬಗ್ಗೆ ಬಿಜೆಪಿಗೆ ಸಾಫ್ಟ್ ಕಾರ್ನರ್ ಇದೆನಾ?
ಬಿಎಸ್‍ವೈ: ನಮಗೂ ಜೆಡಿಎಸ್ ಗೂ ಯಾವುದೇ ಸಂಬಂಧವಿಲ್ಲ. ಇತ್ತೀಚೆಗೆ ರಾಹುಲ್ ಗಾಂಧಿ ಜೆಡಿಎಸ್ ಬಗ್ಗೆ ಮಾತನಾಡಿ ಇರುವ ಅಲ್ಪ ಸ್ವಲ್ಪ ಗೌಡ ಸಮುದಾಯದ ಮತಗಳನ್ನು ಕಳೆದುಕೊಂಡಿದ್ದಾರೆ. ಈ ಎರಡು ತಿಂಗಳ ಹಿಂದೆ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ಏನೇ ಮಾತನಾಡಿದ್ರು ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಶ್ನೆ: ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದ್ರೆ ಏನಾಗುತ್ತದೆ?
ಬಿಎಸ್‍ವೈ: ಇಂದಿನ ಯುವ ಜನತೆ ಪ್ರಧಾನಿಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಸಹಜವಾಗಿಯೇ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಷ್ಟು ನಮಗೆ ಲಾಭವಾಗಲಿದೆ. ಮೋದಿ ಪ್ರವಾಸದಿಂದ ಗೆಲ್ಲುವ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ.
ಪ್ರಶ್ನೆ: ವಿಧಾನಸಭಾ ಚುನಾವಣೆಗೆ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡ್ತಾರಾ?
ಬಿಎಸ್‍ವೈ: ಶೋಭಾ ಕರಂದ್ಲಾಜೆ ಸಂಸದೆಯಾಗಿದ್ದು, ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಈ ಬಾರಿ ಕೇವಲ ಸಂಸದರಾಗಿರುವ ನನಗೆ ಮತ್ತು ಶ್ರೀರಾಮುಲು ಅವರಿಗೆ ಮಾತ್ರ ಹೈಕಮಾಂಡ್ ಟಿಕೆಟ್ ನೀಡಿದೆ ಅಂದ್ರು.