ಬೆಂಗಳೂರು: ನಿಗದಿತ ಸಮಯಕ್ಕೆ ವೈದ್ಯರು ಬಾರದ ಕಾರಣ ಆಸ್ಪತ್ರೆ ಮುಂಭಾಗದಲ್ಲಿ ರೋಗಿಗಳು ಪರದಾಟ ನಡೆಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಪ್ರತಿ ನಿತ್ಯದಂತೆ ರೋಗಿಗಳು ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಬಂದಾಗ ಬಾಗಿಲಿಗೆ ಬೀಗ ಹಾಕಲಾಗಿತ್ತು. ಆದರೆ ಸಮಯ 10 ಗಂಟೆಯಾದರೂ ಬಾಗಿಲು ತೆರೆಯದೇ ಇದ್ದಾಗ ರೋಗಿಗಳ ಸಂಬಂಧಿಕರು ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರೆ.
ಮುಂಭಾಗದ ಬಾಗಿಲಲ್ಲಿ ರೋಗಿಗಳ ನರಳಾಟ ಕಂಡು ಚಿತ್ರೀಕರಣಕ್ಕೆ ಮುಂದಾದ ಮಾಧ್ಯಮದವರ ಮೇಲೆ ಆಸ್ಪತ್ರೆ ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ. ಆಸ್ಪತ್ರೆಗೆ ವೈದ್ಯರು ಬಾರದ ಕಾರಣ ಕ್ಲೀನ್ ಮಾಡುವ ನೆಪದಲ್ಲಿ ಸಿಬ್ಬಂದಿ ಬೀಗ ಜಡಿದಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.
100 ಹಾಸಿಗೆ ಹೊಂದಿರುವ ಆಸ್ಪತ್ರೆ ಇದಾಗಿದ್ದು, ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಆದರೆ ನಿಗದಿತ ಸಮಯಕ್ಕೆ ವೈದ್ಯರು ಬಾರದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಡಾಕ್ಟರ್ ಇಲ್ಲದ ಸಮಯದಲ್ಲಿ ಆಸ್ಪತ್ರೆ ಕ್ಲೀನಿಂಗ್ ನೆಪದಲ್ಲಿ ಸಿಬ್ಬಂದಿ ಬೀಗ ಜಡಿಯುವ ಪ್ಲಾನ್ ರೂಪಿಸಿ ರೋಗಿಗಳು ಪರದಾಡುವಂತೆ ಮಾಡುತ್ತಿದ್ದಾರೆಂದು ರೋಗಿಯೊಬ್ಬರ ಸಂಬಂಧಿ ರಮೇಶ್ ಆರೋಪಿಸಿದ್ದಾರೆ.