ಚಿಕ್ಕಬಳ್ಳಾಪುರ: ಮೂರು ತಿಂಗಳ ಹೆಣ್ಣು ಮಗುವೊಂದನ್ನು ಆಸ್ಪತ್ರೆಯಲ್ಲಿ ತಾಯಿ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ಬಂದಿದ್ದ ತಾಯಿ ಮಗುವನ್ನ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾಳೆ. ಅಂದಹಾಗೆ ಆಸ್ಪತ್ರೆಗೆ ಚಿಕಿತ್ಸೆಗೆ ಅಂತ ಬಂದಿದ್ದ ಮಹಿಳೆ ಆಸ್ಪತ್ರೆಯ ಆವರಣದಲ್ಲಿ ಮಗುವನ್ನು ಮಲಗಿಸಿ ಮಾತ್ರೆ ತರುವುದಾಗಿ ಹೇಳಿ ಹೊರಗೆ ಹೋಗಿದ್ದಾಳೆ. ಆದರೆ ಎಷ್ಟು ಹೊತ್ತು ಕಳೆದರೂ ಮಾತ್ರೆ ತರಲು ಹೋದ ತಾಯಿ ಮರಳಿ ಬರಲಿಲ್ಲ. ಇತ್ತ ಮಗು ಅಳಲಾರಂಭಿಸಿದೆ. ಇದರಿಂದ ಅಲ್ಲಿದ್ದ ಸ್ಥಳೀಯರು ಮಗುವನ್ನು ಆಸ್ಪತ್ರೆಯ ದಾದಿಯರಿಗೆ ಹಸ್ತಾಂತರ ಮಾಡಿದ್ದು, ದಾದಿಯರು ಮಗುವಿನ ಹಾರೈಕೆ ಮಾಡಿದ್ದಾರೆ.
Advertisement
Advertisement
ಮಗುವನ್ನು ನೋಡಲು ಆಸ್ಪತ್ರೆಯಲ್ಲಿದ್ದವರು ಮುಗಿಬಿದ್ದಿದ್ದು, ಮಗುವನ್ನು ತಮಗೆ ಕೊಡಿ ಅಂತ ಕೇಳಿಕೊಂಡಿದ್ದಾರೆ. ಆದರೆ ಮಗುವನ್ನು ಆ ರೀತಿ ಯಾರಿಗೂ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದಾದಿಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಚಿಂತಾಮಣಿ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು, ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ.
Advertisement
Advertisement
ಆಸ್ಪತ್ರೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿರಬಹುದು ಎಂದು ಹುಡುಕಾಟ ನಡೆಸಲು ಮುಂದಾದ ಪೊಲೀಸರಿಗೂ ನಿರಾಸೆಯಾಗಿದೆ. ಕಾರಣ ಸಿಸಿಟಿವಿ ಕೆಟ್ಟುಹೋಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಸೇರಿಸಲು ಆಸ್ಪತ್ರೆಯ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.