ಎಂಟಿಬಿಗೆ ಅಕ್ರಮ ದುಡ್ಡಿನ ಹೆದರಿಕೆ ಇದೆಯಾ: ಸಿದ್ದರಾಮಯ್ಯ ಪ್ರಶ್ನೆ

Public TV
2 Min Read
MTB Nagaraj Siddu

– ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳನ್ನ ಮುಚ್ಚುವುದೇ ಮೋದಿ ಸಾಧನೆ
– ಹೊಸಕೋಟೆ ಕ್ಷೇತ್ರದಲ್ಲಿ ಮಾಜಿ ಸಿಎಂ ಭರ್ಜರಿ ಪ್ರಚಾರ

ಬೆಂಗಳೂರು: ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರಿಗೆ ಅಕ್ರಮ ದುಡ್ಡಿನ ಹೆದರಿಕೆ ಇದೆಯಾ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಪರ ಸಿದ್ದರಾಮಯಯ್ಯ ಅವರು ನಂದಗುಡಿಯಲ್ಲಿ ಭರ್ಜರಿ ಪ್ರಚಾರ ಮಾಡಿದರು. ಈ ವೇಳೆ ಬಿಜೆಪಿ, ಅನರ್ಹ ಶಾಸಕ ಎಂಟಿವಿ ನಾಗರಾಜ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಎಂಟಿಬಿ ನಾಗರಾಜ್ ಒಟ್ಟು ಆಸ್ತಿ ಮೌಲ್ಯ 1,195 ಕೋಟಿ ರೂ.

Hoskote Siddu A

ಹೊಸಕೋಟೆ ಉಪಚುನಾವಣೆಯನ್ನು ಇಲ್ಲಿನ ಯಾವ ಮತದಾರನೂ ಬಯಸಿರಲಿಲ್ಲ. ಎಂಟಿಬಿ ನಾಗರಾಜ್ ನಮ್ಮ ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಸೇರಿದ್ದರ ಫಲ ಕ್ಷೇತ್ರ ಮತ್ತೊಂದು ಚುನಾವಣೆ ಎದುರಿಸುವಂತಾಗಿದೆ. ಅವರಿಗೆ ಹೊಸಕೋಟೆ ಕ್ಷೇತ್ರದಲ್ಲಿ 4 ಬಾರಿ ಪಕ್ಷ ಟಿಕೆಟ್ ನೀಡಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಇದರ ನಂತರವೂ ಪಕ್ಷ ಬಿಡಲು ಕಾರಣವೇನು? ಅಕ್ರಮ ದುಡ್ಡಿನ ಹೆದರಿಕೆಯಾ? ಈ ಬಗ್ಗೆ ಮತದಾರರು ಅವರನ್ನು ಪ್ರಶ್ನಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಪಕ್ಷ ಬಿಡುವ ಮೊದಲು ಎಂಟಿಬಿ ನಾಗರಾಜ್ ನಮ್ಮನೆಗೆ ಬಂದಿದ್ದರು. ಯಾಕೆ ಪಕ್ಷ ಬಿಡ್ತೀಯಪ್ಪ? ಎಂದು ಕೇಳಿದ್ದೆ. ಅದಕ್ಕೆ ಪಕ್ಷ ಬಿಟ್ಟು ನಿಮ್ಮ ಜೊತೆ ಬರುತ್ತೇನೆ ಎಂದು ನಾನು ಶಾಸಕ ಸುಧಾಕರ್ ಅವರಿಗೆ ಮಾತುಕೊಟ್ಟಿದ್ದೇನೆ ಎಂದಿದ್ದರು. ಕಾಂಗ್ರೆಸ್ ಬಿಡುವ ಮುನ್ನ ಜನರನ್ನು ಕೇಳಿದ್ದರೋ? ಇವರನ್ನು ಗೆಲ್ಲಿಸಿದ್ದು ಸುಧಾಕರ್ ಅವರೋ ಅಥವಾ ಹೊಸಕೋಟೆ ಜನತೆಯೋ ಎಂದು ಪ್ರಶ್ನಿಸಿದರು.

Hoskote Siddu B

ಸ್ವಾರ್ಥಕ್ಕಾಗಿ ನಂಬಿದವರ ಬೆನ್ನಿಗೆ ಚೂರಿ ಹಾಕುವವರಿಗೆ ಮತ ನೀಡಿದರೆ ಅಂಥವರು ಜನರ ಪರವಾಗಿ ಕೆಲಸ ಮಾಡುತ್ತಾರಾ? ರಾಜಕೀಯ ಪಕ್ಷಗಳು ಉಳಿದಿರುವುದು ಜನರಿಂದ, ಕಾರ್ಯಕರ್ತರಿಂದಲೇ ಹೊರತು ನಾಯಕರುಗಳಿಂದ ಅಲ್ಲ. ಸಾವಿರ ಪಕ್ಷಗಳನ್ನು ಉಳಿಸುವ, ಬೆಳೆಸುವ ಶಕ್ತಿ ಇರುವುದು ಮತದಾರರಲ್ಲಿ ಮಾತ್ರ ಎಂಬುದನ್ನು ಮರೆಯಬಾರದು ಎಂದು ಗುಡುಗಿದರು.

ದೇಶದ ಸರ್ವೋಚ್ಛ ನ್ಯಾಯಾಲಯವೇ ಎಂಟಿಬಿ ನಾಗರಾಜ್ ಅವರನ್ನು ಅನರ್ಹ ಎಂದು ಹೇಳಿದೆ. ಮತ್ತೆ ಯಾವ ಮುಖ ಹೊತ್ತುಕೊಂಡು ಜನರ ಬಳಿ ಮತ ಕೇಳಲು ಬರುತ್ತಾರೆ. ಪಕ್ಷಾಂತರ ಮಾಡಿದವರೆಲ್ಲ ರಾಜಕೀಯದಲ್ಲಿ ಇರಲು ನಾಲಾಯಕ್ ಅಂತ ಸುಪ್ರೀಂಕೋರ್ಟ್ ಹೇಳಿದ ಮೇಲೆ ಜನತೆ ಅವರಿಗೆ ಮತ ನೀಡಬೇಕೆ ಎಂದು ಪ್ರಶ್ನಿಸಿದರು.

Hoskote Siddu

ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೇ ಕಾಂಗ್ರೆಸ್ ಸ್ಥಾಪಿಸಿದ ಬಿಎಸ್‍ಎನ್‍ಎಲ್, ಬಿಇಎಂಎಲ್, ಹೆಚ್‍ಎಂಟಿ, ಏರ್ ಇಂಡಿಯಾ ಸಂಸ್ಥೆಗಳನ್ನು ಒಂದೊಂದಾಗಿ ಬಾಗಿಲು ಹಾಕಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳ ಬಾಗಿಲು ಹಾಕಿಸಿದ್ದೊಂದೇ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯಾಗಲಿದೆ ಎಂದು ಕುಟುಕಿದರು.

ನಮ್ಮದು ಸಹೋದರತ್ವ, ಸಹಬಾಳ್ವೆಯ ಸಿದ್ಧಾಂತವನ್ನು ನಂಬಿರುವ ಪಕ್ಷ. ಎಂಟಿಬಿ ನಾಗರಾಜ್ ಸೇರಿರುವುದು ಸಮಾಜ ಒಡೆಯುವ ಕೋಮುವಾದಿ ಪಕ್ಷವನ್ನು. ಸಮಾಜ ಕಟ್ಟುವ ಕೈ ಬೆಂಬಲಿಸಬೇಕೋ ಅಥವಾ ಸಮಾಜ ಒಡೆಯುವ ಕೈ ಬೆಂಬಲಿಸಬೇಕೋ ಎಂದು ಯೋಚಿಸಿ ಮತ ನೀಡಿ. ಅನರ್ಹರನ್ನು ಸೋಲಿಸಿ, ಅರ್ಹರನ್ನು ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಮತದಾರರಿಗೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *