Connect with us

Bengaluru Rural

ಅನರ್ಹರ ತೀರ್ಪು ಬಂದ ಬೆನ್ನಲ್ಲೇ ಬಿಜೆಪಿಯಲ್ಲಿ ಮೊದಲ ಬಂಡಾಯ

Published

on

– ಆರ್.ಅಶೋಕ್ ಎಚ್ಚರಿಕೆಯ ನಡುವೆ ಶರತ್ ಬಚ್ಚೇಗೌಡ ಸಂಘಟನೆ
– ಸ್ವಾಭಿಮಾನಿ ಕಾರ್ಯಕರ್ತರ ಸಭೆ
– ಗುರುವಾರ ನಾಮಪತ್ರ ಸಲ್ಲಿಕೆಗೆ ಸಿದ್ಧತೆ

ಬೆಂಗಳೂರು: ಅನರ್ಹ ಶಾಸಕರ  ತೀರ್ಪು ಬಂದ ಬೆನ್ನಲ್ಲೇ ಬಿಜೆಪಿಗೆ ಮೊದಲ ಬಂಡಾಯ ಎದ್ದಿದೆ. ಕಂದಾಯ ಸಚಿವ ಆರ್.ಅಶೋಕ್ ಖಡಕ್ ಎಚ್ಚರಿಕೆ ನಡುವೆಯೂ ಹೊಸಕೋಟೆಯ ಬಿಜೆಪಿ ಯುವ ನಾಯಕ ಶರತ್ ಬಚ್ಚೇಗೌಡ ಸಂಘಟನೆ ನಡೆಸಿದ್ದಾರೆ.

ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ ಅವರ ಅಸಮಾಧಾನ ಸ್ಫೋಟಗೊಂಡಿದ್ದು, ಸ್ವತಂತ್ರವಾಗಿ ಚುನಾವಣಾ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಶರತ್ ಬಚ್ಚೇಗೌಡ ಸ್ಪರ್ಧೆಗೆ ನಿಲ್ಲಲಿ: ಎಂಟಿಬಿ ಸವಾಲು

ಹೊಸಕೋಟೆ ಬಳಿಯ ಉಪ್ಪಾರಹಳ್ಳಿ ಕರಗದಮ್ಮ ಪಾರ್ಟಿಹಾಲ್‍ನಲ್ಲಿ ಶರತ್ ಬಚ್ಚೇಗೌಡ ಅವರು ಇಂದು ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹೊಸಕೋಟೆ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರು ಭಾಗವಿಸಿ, ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ನಾಮಪತ್ರ ಸಲ್ಲಿಸಲು ಶರತ್ ಬಚ್ಚೇಗೌಡ ಸಕಲ ಸಿದ್ಧತೆ ನಡೆಸಿದ್ದಾರೆ.

ಶರತ್ ಬಚ್ಚೇಗೌಡ ಅವರು ಈಗಾಗಲೇ ಕರಪತ್ರಗಳನ್ನು ಮುದ್ರಿಸಿ, ಸ್ವಾಭಿಮಾನಿ ಸಭೆಯಲ್ಲಿ ಹಂಚಿದ್ದಾರೆ. ‘ನನ್ನ ಪ್ರೀತಿಯ ಹೊಸಕೋಟೆ ಜನತೆಯ ನಿರ್ಧಾರದಂತೆ ಈ ಬಾರಿ ವಿಧಾನಸಭಾ ಚುನವಣೆಗೆ, ಹೊಸಕೋಟೆ ಸ್ವಾಭಿಮಾನದ ಉಳಿವಿಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನವೆಂಬರ್ 14ರಂದು ತಾಲೂಕಿನ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರ ಬಂಧುಗಳು ಆಗಮಿಸಿ ಆಶೀರ್ವದಿಸಬೇಕಾಗಿ ಕೋರುತ್ತಿದ್ದೇನೆ’ ಎಂದು ಶರತ್ ಕರಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇತ್ತ ಎಂಟಿಬಿ ನಾಗರಾಜ್ ಅವರು ಶರತ್ ಬಚ್ಚೇಗೌಡ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧನಾಗಿರುವೆ. ಬಿಜೆಪಿ ಟಿಕೆಟ್ ನನಗೆ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಫೈಟ್ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Click to comment

Leave a Reply

Your email address will not be published. Required fields are marked *