ಟೆಹ್ರಾನ್: ಇರಾನ್ ಬಳಿ ನ್ಯೂಕ್ಲಿಯರ್ ವೆಪನ್ ಇರಬಹುದು. ಆದರೆ, ಇರಾನ್ ಪಾಲಿಗೆ ಈ ಯುದ್ಧದಲ್ಲಿ ಅದಕ್ಕಿಂತ ಶಕ್ತಿಶಾಲಿ ಅಸ್ತ್ರವಾಗಿ ಹೊರಹೊಮ್ಮಿರುವುದು ಹಾರ್ಮುಜ್ ಜಲಸಂಧಿ (Strait of Hormuz). ಅದ್ಯಾವಾಗ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿ ಸುಪ್ರೀಂ ಲೀಡರ್ ಅಯಾತೊಲ್ಲಾ ಅಲಿ ಖಮೇನಿ ಅವರನ್ನ ಹತ್ಯೆ ಮಾಡಿತೋ.. ಆ ಕೂಡಲೆ ರಣತಂತ್ರವಾಗಿ ಇರಾನ್ (Iran) ಕಣ್ಣಿಟ್ಟಿದ್ದು ಹಾರ್ಮುಜ್ ಜಲಸಂಧಿ ಮೇಲೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ಇರಾನ್ ಟ್ರಂಪ್‌ಗೆ ಹೊಸ ಎಚ್ಚರಿಕೆಯೊಂದನ್ನು ನೀಡಿದೆ.
ಅಮೆರಿಕವು (America) ತನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿದ್ರೆ, ಹಾರ್ಮುಜ್ ಜಲಸಂಧಿಯನ್ನ ಸಂಪೂರ್ಣ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಟ್ರಂಪ್ 48 ಗಂಟೆ ಡೆಡ್‌ಲೈನ್ – ಮಿತ್ರರಾಷ್ಟ್ರಗಳಿಗಷ್ಟೇ ಹಾರ್ಮುಜ್ ಜಲಸಂಧಿ ತೆರೆದ ಇರಾನ್

ಇರಾನ್‌ನ ಮಿಲಿಟರಿ ಕಮಾಂಡ್ ಖತಮ್ ಅಲ್-ಅನ್ಬಿಯಾ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಹೇಳಿದೆ, ಇರಾನ್‌ನ ವಿದ್ಯುತ್ ಸ್ಥಾವರಗಳ (Power Plants) ಮೇಲೆ ಅಮೆರಿಕ ಬೆದರಿಕೆಯೊಡ್ಡಿದಂತೆ ದಾಳಿ ನಡೆಸಿದ್ರೆ, ಹಾರ್ಮುಜ್ ಜಲಸಂಧಿಯನ್ನ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ನಾಶವಾದ ನಮ್ಮ ವಿದ್ಯುತ್ ಸ್ಥಾವರಗಳನ್ನ ಪುನರ್ನಿರ್ಮಿಸುವವರೆಗೆ ಜಲಸಂಧಿಯನ್ನ ತೆರೆಯಲಾಗುವುದಿಲ್ಲ ಎಂದಿದೆ.
ಟ್ರಂಪ್ ಏನು ಎಚ್ಚರಿಕೆ ನೀಡಿದ್ರು?
ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕಾಗಿ ಇರಾನ್ ಮತ್ತೆ ತೆರೆಯಬೇಕು. ಇಲ್ಲದಿದ್ದರೆ, ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು.

ಟ್ರಂಪ್ ಅವರ ಎಚ್ಚರಿಕೆಗೆ ಪ್ರತಿಕ್ರಿಯಿಸಿದ್ದ ಇರಾನ್ ಸೇನೆಯು, ಈ ಪ್ರದೇಶದಲ್ಲಿ ಅಮೆರಿಕಕ್ಕೆ ಸೇರಿದ ಎಲ್ಲಾ ಇಂಧನ, ತಂತ್ರಜ್ಞಾನ ಮತ್ತು ಉಪ್ಪುನೀರಿನ ನಿರ್ಮೂಲನ ಮೂಲಸೌಕರ್ಯಗಳನ್ನ ಟಾರ್ಗೆಟ್ ಮಾಡಿ ಹೊಡೆಯುವುದಾಗಿ ಬೆದರಿಕೆ ಹಾಕಿದೆ. ಇದನ್ನೂ ಓದಿ: ಟ್ರಂಪ್ 48 ಗಂಟೆ ಡೆಡ್‌ಲೈನ್ – ಮಿತ್ರರಾಷ್ಟ್ರಗಳಿಗಷ್ಟೇ ಹಾರ್ಮುಜ್ ಜಲಸಂಧಿ ತೆರೆದ ಇರಾನ್

