ಕಳೆದೊಂದು ತಿಂಗಳಿಂದಲೇ ಶುರುವಾಗಿರುವ ಮಧ್ಯಪ್ರಾಚ್ಯ ಯುದ್ಧ ಇದೀಗ ಕದನ ವಿರಾಮದೊಂದಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇರಾನ್, ಅಮೆರಿಕ ಹಾಗೂ ಇಸ್ರೇಲ್ ನಡುವಿನ ಈ ಯುದ್ಧ ಇಡೀ ಜಗತ್ತನ್ನೇ ಅಲುಗಾಡಿಸಿತು. ಹಲವು ದೇಶಗಳು ಸೇರಿದಂತೆ ಭಾರತದ ಮೇಲೆಯೂ ತೀವ್ರವಾಗಿ ಪರಿಣಾಮ ಬೀರಿತು. ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆದ ಪರಿಣಾಮ ಜಗತ್ತಿನ ಕೆಲ ದೇಶಗಳು ವಿಪರೀತ ತೊಂದರೆ ಅನುಭವಿಸಿದವು. ಇದರ ಜೊತೆಗೆ ಭಾರತದ ಹೆದ್ದಾರಿ ಯೋಜನೆಯಲ್ಲಿಯೂ ಸಮಸ್ಯೆ ಎದುರಾಗಿದೆ.
ಇರಾನ್, ಅಮೆರಿಕ ಹಾಗೂ ಇಸ್ರೇಲ್ ನಡುವಿನ ಈ ಪಶ್ಚಿಮ ಏಷ್ಯಾ ಯುದ್ಧವು ಜಗತ್ತಿನ ಅತಿ ದೊಡ್ಡ ಹಾಗೂ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದರ ಜೊತೆಗೆ ಯುದ್ಧವನ್ನು ತಾರಕಕ್ಕೆ ತೆಗೆದುಕೊಂಡು ಹೋಗಿದ್ದವು. ಇದರ ಪರಿಣಾಮವಾಗಿ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ಇಂಧನ ಸರಬರಾಜು ಅಸ್ತವ್ಯಸ್ತಗೊಂಡಿತ್ತು. ಇದರ ಜೊತೆ ಜೊತೆಗೆ ಹೆದ್ದಾರಿ ಕಾಮಗಾರಿಗಳ ಮೇಲೆಯೂ ದೊಡ್ಡ ಹೊಡೆತ ಬಿದ್ದಿದೆ.

ರಸ್ತೆ ಕಾಮಗಾರಿಗಳ ಮೇಲೆ ಹೊಡೆತ ಏಕೆ?
ಹಾರ್ಮುಜ್ ಜಲಸಂಧಿ ಮೂಲಕ ವಿಶ್ವದ ಸುಮಾರು ಶೇ. 20ರಷ್ಟು ತೈಲ ಸಾಗಾಟ ನಡೆಯುತ್ತದೆ. ಜೊತೆಗೆ ಭಾರತಕ್ಕೆ ಬೇಕಾದ ತೈಲ ಮತ್ತು ಎಲ್‌ಪಿಜಿ ಪೂರೈಕೆಯು ಇದೇ ಮಾರ್ಗದಿಂದ ನಡೆಯುತ್ತದೆ. ಯುದ್ಧದ ಪರಿಣಾಮ ತೈಲ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿ, ಬಿಟುಮಿನ್ ದರ ಏರಿಕೆಯಾಯಿತು.
ಇದು ನೇರವಾಗಿ ಕಚ್ಚಾ ತೈಲದಿಂದ ತಯಾರಾಗುವ ಒಂದು ವಸ್ತುವಾಗಿದ್ದು, ರಸ್ತೆ ಕಾಮಗಾರಿಯಲ್ಲಿ ಬಳಸುವ ಜಿಗುಟಾದ ಟಾರ್ ಇದಾಗಿದೆ. ಹೀಗಾಗಿ ಹಾರ್ಮುಜ್ ಜಲಸಂಧಿ ಸ್ಥಗಿತಗೊಂಡ ಬಳಿಕ ಕಚ್ಚಾ ತೈಲ ಪೂರೈಕೆ ಕಡಿಮೆಯಾಯಿತು. ಇದರ ಪರಿಣಾಮ ಬಿಟುಮಿನ್ ಪೂರೈಕೆಯು ಹಾಗೂ ಉತ್ಪಾದನೆಯು ಕಡಿಮೆಯಾಗಿ ಹೆದ್ದಾರಿ ಕಾಮಗಾರಿಗಳ ಮೇಲೆ ಪರಿಣಾಮ ಉಂಟಾಯಿತು. ಸದ್ಯ ಕದನ ವಿರಾಮ ಘೋಷಣೆಯಾಗಿದ್ದರೂ ಕೂಡ ತೈಲ ಮತ್ತು ಇನ್ನಿತರ ವಸ್ತುಗಳ ಸಾಗಾಟದ ಮಾರ್ಗದಲ್ಲಿ ಅಡ್ಡಿ ಉಂಟಾಗಿದೆ. ಹೀಗಾಗಿ ಬಿಟುಮಿನ್ ಅಭಾವ ಉಂಟಾಗಿ ಪೂರೈಕೆಯಲ್ಲಿಯೂ ಹಾಗೂ ಬೆಲೆಯಲ್ಲಿಯೂ ಏರಿಕೆಯಾಯಿತು.

ಏನಿದು ಬಿಟುಮಿನ್?
ರಸ್ತೆಗಳನ್ನು ನಿರ್ಮಿಸಲು ಮತ್ತು ದುರಸ್ತಿ ಮಾಡಲು ಬಳಸುವ ಪ್ರಮುಖ ವಸ್ತು ಎಂದರೆ ಅದು ಬಿಟುಮಿನ್. ಇದು ನೇರವಾಗಿ ಕಚ್ಚಾ ತೈಲದಿಂದ ತಯಾರಾಗುತ್ತದೆ. ಇದೊಂದು ಕಚ್ಚಾ ತೈಲದಿಂದ ತಯಾರಾಗುವ ದಪ್ಪ ಹಾಗೂ ಜಿಗುಟಾದ ಕಪ್ಪು ಬಣ್ಣದ ವಸ್ತುವಾಗಿದೆ. ಕಚ್ಚಾ ತೈಲದಿಂದ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಉತ್ಪಾದಿಸಿದ ನಂತರ ಉಳಿಯುವ ವಸ್ತುವಿಂದ ತಯಾರಾಗುವುದೇ ಬಿಟುಮಿನ್.
ಇದು ಪೆಟ್ರೋಲಿಯಂ ಉತ್ಪನ್ನಗಳಂತೆ ಹೆಚ್ಚಾಗಿ ಕೇಳಿಸದಿದ್ದರೂ ರಸ್ತೆ ಕಾಮಗಾರಿಯಲ್ಲಿ ಬಳಸುವ ಪ್ರಮುಖ ಹಾಗೂ ಮೂಲ ವಸ್ತುವಾಗಿ ಕಾರ್ಯನಿರ್ವಹಿಸುತ್ತದೆ. ಇದು ಜಲ ನಿರೋಧಕ, ಹೆಚ್ಚು ಬಾಳಿಕೆ ಬರುವಂತೆ ಮತ್ತು ರಸ್ತೆ ಕಾಮಗಾರಿ ವೇಳೆ ವಸ್ತುಗಳನ್ನು ಒಗ್ಗಟ್ಟಾಗಿ ಹಾಗೂ ಬಂಧಿಸುವ ಕೆಲಸ ಮಾಡುತ್ತದೆ. ಇದನ್ನು ಬಿಸಿ ಮಾಡಿ ಕಲ್ಲು ಮತ್ತು ಮರಳಿನೊಂದಿಗೆ ಬೆರೆಸಿದಾಗ ಇದು ಡಾಂಬರ್ ರೂಪವನ್ನು ಪಡೆದುಕೊಳ್ಳುತ್ತದೆ.

ಸಾಮಾನ್ಯವಾಗಿ ಭಾರತದಲ್ಲಿ ರಸ್ತೆ ಕಾಮಗಾರಿಯಲ್ಲಿ ಬಳಸುವ ಪ್ರಮುಖ ವಸ್ತು ಬಿಟುಮಿನ್. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯ ಪ್ರಮುಖ ವಸ್ತುವಾಗಿ ಕೆಲಸ ಮಾಡುತ್ತದೆ.
ಹೆದ್ದಾರಿ ಕಾಮಗಾರಿಗಳು, ಹಳೆ ರಸ್ತೆಗಳ ಪುನರುಜ್ಜೀವನ ಹಾಗೂ ಗುಂಡಿ ತುಂಬಲು ಇದನ್ನು ಬಳಸಲಾಗುತ್ತದೆ. ಭಾರತದಲ್ಲಿ ವಿಶೇಷವಾಗಿ ರಸ್ತೆಗಳು ಈ ಡಾಂಬರಿನಿಂದ ತಯಾರಾಗುತ್ತದೆ. ರಸ್ತೆಗಳ ಜೊತೆಗೆ ಕಿರುಕುಗಳನ್ನ ಮುಚ್ಚುವುದು ಮತ್ತು ವಿಮಾನದ ರನ್ ವೇ ಗಳಲ್ಲಿಯೂ ಕೂಡ ಇದನ್ನು ಬಳಸಲಾಗುತ್ತದೆ. ದೊಡ್ಡ ಪ್ರಮಾಣದ ದಾರಿಯ ಯೋಜನೆಗಳಿಗೆ ಇದು ಕೇಂದ್ರ ಬಿಂದುವಾಗಿದೆ.

ಸದ್ಯ ಬಿಟುಮಿನ್ ಪೂರೈಕೆ ಕಡಿಮೆಯಿಂದಾಗಿ ಅಥವಾ ಬೆಲೆ ಏರಿಕೆಯಿಂದಾಗಿ ನಿರ್ಮಾಣದ ಮೇಲೆ ಪರಿಣಾಮ ಬೀರುವುದರ ಜೊತೆಗೆ ರಸ್ತೆ ಗುಣಮಟ್ಟ ಮತ್ತು ಕೋಟ್ಯಂತರ ಜನರ ದೈನಂದಿನ ಪ್ರಯಾಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಭಾರತದ ಮೇಲೆ ಹೆಚ್ಚಿನ ಪರಿಣಾಮ ಏಕೆ?
ಭಾರತ ರಸ್ತೆ ನಿರ್ಮಿಸಲು ಬಳಸುವ ಡಾಂಬರು ಅಥವಾ ಬಿಟುಮಿನ್ ಶೇಕಡ 95 ರಿಂದ 99 ರಷ್ಟು ಭಾಗವನ್ನ ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಸ್ಥಗಿತಗೊಂಡಿತ್ತು. ಸದ್ಯ ಕದನ ವಿರಾಮ ಘೋಷಣೆಯಾಗಿದ್ದರೂ ಕೂಡ ಸಂಪೂರ್ಣವಾಗಿ ಹಡಗುಗಳು ಸಂಚರಿಸುತ್ತಿಲ್ಲ ಬದಲಾಗಿ ಮಾರ್ಗ ಬದಲಾಯಿಸಿ ವಿಳಂಬವಾಗಿ ದೇಶಕ್ಕೆ ಆಗಮಿಸುತ್ತಿವೆ. ಇದರಿಂದಾಗಿ ಭಾರತಕ್ಕೆ ಪೂರೈಕೆ ಕಡಿಮೆಯಾಗಿ ಸರಕು ಸಾಗಣೆ ವೆಚ್ಚದಲ್ಲಿಯೂ ಹೆಚ್ಚಳವಾಗಿದೆ.

ಅಲ್ಲದೆ ಯುದ್ಧದ ಸಮಯದಲ್ಲಿ ತೈಲ ಬೆಲೆಗಳಲ್ಲಿ ಏರಿಕೆಯಾದ ಪರಿಣಾಮ ಬಿಟುಮಿನ್ ಬೆಲೆಯಲ್ಲಿಯೂ ಏರಿಕೆಯಾಯಿತು. ವರದಿಗಳ ಪ್ರಕಾರ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು ಕೆಲವು ಸ್ಥಳಗಳಲ್ಲಿ ಪ್ರತಿ ಟನ್ ಗೆ 45,000 ರೂ.ಗಳಿಂದ 65,000 ರೂ.ಗಳಿಗೆ ಏರಿಕೆಯಾಗಿದೆ. ಜೊತೆಗೆ ಭಾರತದಲ್ಲಿಯೂ ಕೂಡ ಇತ್ತೀಚಿನ ತಿಂಗಳುಗಳಲ್ಲಿ ಶೇಕಡ 40 ರಿಂದ 50 ರಷ್ಟು ಏರಿಕೆಯಾಗಿದೆ.
ಭಾರತದ ಯಾವೆಲ್ಲ ಯೋಜನೆಗಳು ವಿಳಂಬವಾಗಬಹುದು?
ಮೂಲಗಳ ಪ್ರಕಾರ ಬಿಟುಮಿನ್ ಪೂರೈಕೆ ಸಮಸ್ಯೆಯಿಂದಾಗಿ ದೆಹಲಿಯ ಬಾರಾಪುಲ್ಲಾ ಮೂರನೇ ಹಂತದ ಎತ್ತರದ ಕಾರಿಡಾರ್ ಯೋಜನೆಯ ಕಮ್ಮಗಾರಿ ನಿಧಾನಗೊಂಡಿದೆ. ಈ ಯೋಜನೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬಿಟುಮಿನ್ ಪೂರೈಕೆಯಿಂದಾಗಿ ಕೆಲಸ ಸ್ಥಗಿತಗೊಂಡಿದೆ. ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದರೂ ಕೂಡ ಸ್ಥಿರವಾಗಿ ಪೂರೈಕೆಯಾಗುತ್ತಿಲ್ಲ ಹೀಗಾಗಿ ಕೊರತೆ ಇದೆ. ಅವಶ್ಯಕತೆಗೆ ಅನುಗುಣವಾಗಿ ಬಿಟುಮಿನ್ ಆರ್ಡರ್ ನೀಡಲಾಗಿದ್ದರೂ ಕೂಡ ಬೆಲೆ ಏರಿಕೆ ಹಾಗೂ ಪೂರೈಕೆ ಸಮಸ್ಯೆಯಿಂದಾಗಿ ನಮಗೆ ಸಿಗುತ್ತಿಲ್ಲ. ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಬರುತ್ತದೆ ಎಂದಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿಯೂ ಕೂಡ ಸುಮಾರು 1,500 ಕೋಟಿ ರೂಪಾಯಿ ಮೌಲ್ಯದ ರಸ್ತೆ ಕಾಮಗಾರಿ ನಿಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಕಾರಣ ಬಿಟುಮಿನ್ ದುಬಾರಿಯಾಗಿದ್ದು, ವಿತರಣೆ ಕಷ್ಟವಾಗಿದೆ. ಮಂಗಳೂರಿನಂತಹ ಪ್ರಮುಖ ಕೇಂದ್ರಗಳಿಂದ ಪೂರೈಕೆ ಕಡಿಮೆಯಾಗಿದ್ದು, ಮಳೆಗಾಲಕ್ಕೂ ಮೊದಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟವಾಗಿದೆ.
ದೊಡ್ಡ ನಗರಗಳ ಸಮಸ್ಯೆ ಮಾತ್ರವಲ್ಲದೆ ಅದರ ಜೊತೆಗೆ ಜಾಗತಿಕವಾಗಿ ಪೂರೈಕೆ ಸರಪಳಿಯಲ್ಲಿ ಏರುಪೇರು ಉಂಟಾಗಿದೆ. ಇದರಿಂದ ಸ್ಥಳೀಯವಾಗಿ ಸಮಸ್ಯೆಗಳು ಎದುರಾಗಿದೆ. ಅಲ್ಲದೆ ಇದರಿಂದ ಗುತ್ತಿಗೆದಾರರು ಕೂಡ ನಿಗದಿತ ಬಜೆಟ್ ಗಿಂತ ಕಡಿಮೆ ಇರುವ ಯೋಜನೆಗಳನ್ನು ಮುಂದುವರೆಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಹೆದ್ದಾರಿ ನಿರ್ಮಾಣ ನಿಧಾನವಾಗುವುದು, ರಸ್ತೆ ಕಾಮಗಾರಿ ವಿಳಂಬವಾಗುವುದು ಮತ್ತು ಗುಂಡಿಗಳ ಮುಚ್ಚಳ ಹೀಗೆ ಮುಂತಾದ ಮೂಲ ಸೌಕರ್ಯ ಚಟುವಟಿಕೆಗಳಲ್ಲಿ ಸಮಸ್ಯೆಯ ಎದುರಾಗುತ್ತದೆ.

