ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಹತ್ಯೆಗೀಡಾಗಿದ್ದ ರೇಷ್ಮಾಬಾನು ಶವವನ್ನು ಖಬರಸ್ಥಾನದಿಂದ ಹೊರತೆಗೆದಿದ್ದಾರೆ. ಶವವನ್ನು ಹೊರ ತಗೆದ ಬಳಿಕ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಶವಪರೀಕ್ಷೆಗೆ ಒಳಪಡಿಸಿದ್ದಾರೆ.
ನಡೆದಿದ್ದೇನು?: ಮಾ.24ರಂದು ಚಿತ್ರದುರ್ಗ ಜಿಲ್ಲೆಯ ನಾಗರಾಜ ಎಂಬ ಯುವಕನೊಂದಿಗಿನ ಪ್ರೇಮಪ್ರಕರಣದ ಹಿನ್ನಲೆಯಲ್ಲಿ ರೇಷ್ಮಾಭಾನು ಎಂಬವರನ್ನು ಸ್ವತಃ ತಂದೆ ಮತ್ತು ಅಣ್ಣಂದಿರೇ ಕೊಲೆ ಮಾಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು 26 ದಿನಗಳ ಬಳಿಕ ರೇಷ್ಮಾಬಾನು ಶವವನ್ನು ಹಂಪಸಾಗರದ ಗ್ರಾಮದ ಖಬರಸ್ಥಾನದಲ್ಲಿ ಹೂತಿಟ್ಟ ಗೋರಿಯಿಂದ ಹೊರತೆಗೆದು ಪರೀಕ್ಷೆಗೆ ಒಳಪಡಿಸಿದ್ದಾರೆ.
Advertisement
Advertisement
ಕೊಲೆ ಆರೋಪದಲ್ಲಿ ಈಗಾಗಲೇ ಬಂಧಿತರಾಗಿರುವ ರೇಷ್ಮಭಾನು ತಂದೆ ಮತ್ತು ಸಹೋದರರು ಗುರುತಿಸಿದ ಪ್ರದೇಶದಿಂದ ರೇಷ್ಮಾಬಾನು ಶವವನ್ನು ಹೊರತೆಗೆಯಲಾಯಿತು. ಸ್ಥಳದಲ್ಲೇ ಇದ್ದ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞ ಡಾ.ಗುರುರಾಜ್ ಮತ್ತು ಸಿಬ್ಬಂದಿ ಶವದ ವಿವಿಧ ಅಂಗಾಂಗಳ ತಪಾಸಣೆ ನಡೆಸಿದರು.
Advertisement
ಶವಪರೀಕ್ಷೆ ಸಂದರ್ಭದಲ್ಲಿ ಖಬರಸ್ಥಾನದ ಬಳಿ ಗ್ರಾಮದ ನೂರಾರು ಜನ ಕುತೂಹಲದಿಂದ ವೀಕ್ಷಿಸಿದರು. ಶವವನ್ನು ಹೊರತೆಗೆಯುತ್ತಿದ್ದಂತಯೇ ರೇಷ್ಮಾಬಾನು ತಾಯಿಯ ರೋದನೆ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಕೊಲೆಯಾದ ಚಿತ್ರದುರ್ಗ ಜಿಲ್ಲೆಯ ನಾಗರಾಜನ ಪಾಲಕರು ಭೇಟಿ ನೀಡಿದ್ದು ಅಚ್ಚರಿ ಮೂಡಿಸಿದರು.
Advertisement
ಕೊಲೆಯ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಉದ್ದೇಶದಿಂದ ಶವಪರೀಕ್ಷೆ ನಡೆಸಲಾಗಿದೆ. ಕೊಲೆ ಆರೋಪಿಗಳು ಶವ ಹೂತಿಟ್ಟ ಸ್ಥಳ ಗುರುತಿಸಿದ್ದಾರೆ ಎಂದು ತನಿಖಾಧಿಕಾರಿ ಡಿವೈಎಸ್ಪಿ ಓಂಕಾರ ನಾಯ್ಕ ಹೇಳಿದರು. ಈ ಸಂದರ್ಭದಲ್ಲಿ 22ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕಂದಾಯ ನಿರೀಕ್ಷಕ ಕೊಟ್ರೇಶ್, ಗ್ರಾಮಲೆಕ್ಕಾಧಿಕಾರಿ ಚೇತನ್ ಇತರರಿದ್ದರು.