ಹಾಂಕಾಂಗ್: ಸಾಕು ಪ್ರಾಣಿಗಳ ಅಂಗಡಿಯ ಮಾಲಿಕನೊಬ್ಬನಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಸುಮಾರು 2000 ಪುಟ್ಟ ಪ್ರಾಣಿಗಳನ್ನು ಸಾಯಿಸುವಂತೆ ಹಾಂಕಾಂಗ್ ಆಡಳಿತ ಆದೇಶ ಪ್ರಕಟಿಸಿದೆ.
ಹಾಂಕಾಂಗ್ ನಗರದಲ್ಲಿ ಹ್ಯಾಮ್ಸ್ಟರ್(ಸಣ್ಣ ಜಾತಿಯ ಒಂದು ಸಾಕು ಪ್ರಾಣಿ) ಹಾಗೂ ಇತರ ಸಾಕು ಪ್ರಾಣಿಗಳ ಆಮದನ್ನು ಕೂಡಾ ನಿಷೇಧಿಸುವುದಾಗಿ ಕೃಷಿ, ಮೀನುಗಾರಿಕೆ ಹಾಗೂ ಸಂರಕ್ಷಣಾ ಇಲಾಖೆ ತಿಳಿಸಿದೆ.
ಸಾಕು ಪ್ರಾಣಿ ಅಂಗಡಿಯ ಮಾಲೀಕನಿಗೆ ಸೋಮವಾರ ಕೋವಿಡ್ ಪರೀಕ್ಷೆಯಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿತ್ತು. ನಂತರ ಆತನ ಅಂಗಡಿಯಲ್ಲಿದ್ದ ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಂಡಿದ್ದ ಹಲವಾರು ಪುಟ್ಟ ಪ್ರಾಣಿಗಳಲ್ಲೂ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ
ಕೊರೊನಾ ವೈರಸ್ ಹರಡುವಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುವುದಿಲ್ಲ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ತಿಳಿಸಿತ್ತು. ಆದರೆ ಇವುಗಳಿಂದಲೂ ಸೋಕು ಹರಡುತ್ತದೆ ಎಂದು ಹಾಂಕಾಂಗ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು. ಅವುಗಳನ್ನು ಹೊರಗಡೆ ತರಬೇಡಿ. ಸಾಕು ಪ್ರಾಣಿಗಳೊಂದಿಗೆ ಅದರ ಮಾಲೀಕರು ಉತ್ತಮ ನೈರ್ಮಲ್ಯದ ಬಗ್ಗೆ ಗಮನ ಹರಿಸುವುದು ಅಗತ್ಯ. ಅವುಗಳಿಗೆ ಆಹಾರ ನೀಡುವುದು ಹಾಗೂ ಸ್ಪರ್ಶಿಸಿದ ಬಳಿಕ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಎಂದು ಇಲಾಖೆಯ ನಿರ್ದೇಶಕ ಲೆಂಗ್ ಸಿಯು-ಫೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ