ಹಾಸನ: ಹೊರ ಜಗತ್ತಿಗೆ ತಾನು ರೈತರು, ಮಹಿಳೆಯರ ಪರ ಹೋರಾಟ ಮಾಡುವಾಕೆ ಎಂದು ಬಿಂಬಿಸಿಕೊಂಡಿದ್ದು, ಈಗ ಅಪ್ರಾಪ್ತೆಯನ್ನು ಲೈಂಗಿಕ ಚಟುವಟಿಕೆಗೆ ದೂಡಿದ್ದಲ್ಲದೇ ಯುವಕರಿಗೆ ಬ್ಲ್ಯಾಕ್ ಮೇಲ್ ಮಾಡಿ ಅವರಿಂದ ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟ ಆರೋಪದಡಿಯಲ್ಲಿ ಕಿಲಾಡಿ ಮಹಿಳೆ ಅಂದರ್ ಆಗಿರುವ ಘಟನೆ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮೊಸಳೆಹೊಸಳ್ಳಿ ಮೂಲದ ಪ್ರೇಮಾ ಬಂಧಿತ ಆರೋಪಿ. ಈಕೆ ಕಳೆದ ಏಳೆಂಟು ವರ್ಷಗಳಿಂದ ರೈತಸಂಘ ಹಾಗೂ ಮಹಿಳಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಳು. ಆದರೆ ದಿಢೀರ್ ಹಣ ಮಾಡುವ ದುರಾಸೆಗೆ ಬಿದ್ದು, ದರೋಡೆ, ಅಪಹರಿಸಿ ಹಣಕ್ಕೆ ಬೇಡಿಕೆ ಮತ್ತು ಅಪ್ರಾಪ್ತೆಯರನ್ನು ಲೈಂಗಿಕ ಕ್ರಿಯೆಗೆ ದೂಡಿ ಬ್ಲ್ಯಾಕ್ ಮೇಲ್ ಮಾಡುವ ಕಾನೂನು ವಿರೋಧಿ ಕೃತ್ಯಕ್ಕೆ ಇಳಿದಿದ್ದಳು. ಕಳೆದ ಆಗಸ್ಟ್ 21 ರಂದು ಈ ಘಟನೆ ನಡೆದಿದ್ದು, ಇದೀಗ ಬಯಲಾಗಿದೆ.
Advertisement
Advertisement
ಸುನಿಲ್ ಮತ್ತು ದಿಲೀಪ್
Advertisement
ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆ ನೀಡಿದ ದೂರಿನ ಅನ್ವಯ ತನಿಖೆಗೆ ಮುಂದಾದ ಪೊಲೀಸರಿಗೆ ಮೊದಲು ಅತ್ಯಾಚಾರ ಮಾಡಿದ ದುರುಳರು ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ವಿಚಾರಣೆ ಮಾಡಿದ ಪೊಲೀಸರಿಗೆ ಈ ಪ್ರಕರಣದಲ್ಲಿ ಹನಿಟ್ರ್ಯಾಪ್ ಇದೆ ಎಂದು ಶಂಕಿಸಿದ್ದಾರೆ. ಬಳಿಕ ಅತ್ಯಾಚಾರ ಆರೋಪಿಗಳಿಬ್ಬರು ಪ್ರೇಮಾಳ ಬಗ್ಗೆ ಹೇಳಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಗೊತ್ತಾಗುತ್ತಿದ್ದಂತೆ ತಕ್ಷಣ ಕಾರ್ಯಾಚರಣೆ ಮಾಡಿ ಪ್ರೇಮಾ ಮತ್ತು ಆಕೆಯ ಇಬ್ಬರು ಸಹಚರರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದವರನ್ನು ಬಂದಿಸಲು ಜಾಲ ಬೀಸಿದ್ದಾರೆ.
Advertisement
ಯಾರು ಈ ಪ್ರೇಮಾ?
ಈ ಹಿಂದೆ ಕೋಲಾರ ಜಿಲ್ಲೆಯ ಮುಳಬಾಗಿಲಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಪ್ರೇಮಾ ಭಾಗಿಯಾಗಿ ಜೈಲು ಸೇರಿದ್ದಳು. ಇದೀಗ ಹನಿಟ್ರ್ಯಾಪ್ ಕೃತ್ಯ ಹಾಗೂ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ದೂರಿನಡಿ ಮತ್ತೆ ಜೈಲಿಗೆ ಸೇರಿದ್ದಾಳೆ. ಹಾಸನ ಮೂಲದ ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲೈಂಗಿಕ ಚಟುವಟಿಕೆಗೆ ಪ್ರೇಮಾ ದೂಡಿದ್ದಳು. ಇತ್ತ ಸುನಿಲ್ ಮತ್ತು ದಿಲೀಪ್ ಎಂಬವರಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿಸಿದ್ದು, ನಂತರ ಅವರಿಗೆ ಕರೆ ಮಾಡಿ ಬರೋಬ್ಬರಿ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಕೇಳಿದಷ್ಟು ಹಣ ಕೊಡದೇ ಇದ್ದರೆ ನಿಮ್ಮ ಮೇಲೆ ರೇಪ್ ಕೇಸ್ ಬೀಳಲಿದೆ. ನಂತರ ಜೈಲು ಸೇರುತ್ತೀರಿ ಎಂದು ಬೆದರಿಕೆ ಕೂಡ ಹಾಕಿದ್ದಳು.
ಯುವಕರನ್ನು ಬೆದರಿಸಿ ಪಲ್ಸರ್ ಬೈಕ್ ಪಡೆದಿದ್ದು, ಖಾಲಿ ಚೆಕ್ ಗೆ ಸಹಿ ಮಾಡಿಸಿಕೊಂಡಿದ್ದಳು. ಅಷ್ಟಕ್ಕೆ ಸುಮ್ಮನಾಗದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಳು. 20 ಲಕ್ಷ ರೂ. ಹಣ ಕೊಟ್ಟರೆ ರಾಜಿ ಸಂಧಾನ ಮಾಡಿಸಿ ಕೇಸ್ ಖುಲ್ಲಾ ಮಾಡುವೆ ಎಂದು ನಾಟಕವಾಡಿದ್ದಳು. ಈ ನಡುವೆ ಹಾಸನದ ಖಾಸಗಿ ಲಾಡ್ಜ್ ವೊಂದರಲ್ಲಿ ಅಪ್ರಾಪ್ತೆಯನ್ನ ಅತ್ಯಾಚಾರ ಮಾಡಿದ್ದವರು ಬೆಂಗಳೂರು ಸೇರಿದ್ದರು. ಈ ಬೆಳವಣಿಗೆ ಮಧ್ಯೆ ಸಂತ್ರಸ್ತ ಯುವತಿ ನಗರದ ಮಹಿಳಾ ಠಾಣೆಗೆ ನೀಡಿದ ದೂರು ಆಧರಿಸಿ ಬೆಂಗಳೂರಿನಲ್ಲಿ ಸುನಿಲ್ ಮತ್ತು ದಿಲೀಪ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಾಮುಕರು ಮಾಡಿದ್ದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಅಪಹರಣ ಮತ್ತು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ದೂರಿನ ಹಿನ್ನೆಲೆಯಲ್ಲಿ ಪ್ರೇಮಾ, ಸಚಿನ್ ಮತ್ತು ಆಟೋ ಚಾಲಕ ಪ್ರತಾಪ್ ಸಹ ಜೈಲು ಪಾಲಾಗಿದ್ದು, ಉಳಿದ ಮೂವರಾದ ಅಣ್ಣಪ್ಪ, ಪುಟ್ಟರಾಜು ಮತ್ತು ದಿವಾಕರ್ ಬಂಧನಕ್ಕೆ ತಂಡ ರಚಿಸಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ ಹೇಳಿದ್ದಾರೆ.
ಈವರೆಗೆ ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ಪ್ರಕರಣಗಳು ಇದೀಗ ಹಾಸನದಂಥ ನಗರಗಳಲ್ಲಿ ಆರಂಭವಾಗಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಇದಕ್ಕೆ ಕಾರಣರಾಗಿರುವ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಮಹಿಳೆಯರೇ ಹೀಗಾದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೋರಾಟಗಾರ್ತಿ ಅನ್ನೋ ಸೋಗಿನಲ್ಲಿ ಅನ್ಯಾಯ, ಅನೀತಿ ಕೆಲಸ ಮಾಡುವುದು ಖಂಡನೀಯ ಮತ್ತೆ ಯಾರೂ ಹೀಗೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ನಾಗರಾಜ್ ಹೆತ್ತೂರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv