ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

Public TV
2 Min Read
MNG KAVYA

ಮಂಗಳೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್‍ನ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವು ಸಿಗುತ್ತಿದೆ. ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಗೃಹ ಸಚಿವರು ಮತ್ತು ಸ್ಥಳೀಯ ಶಾಸಕರು ಆಳ್ವಾಸ್ ಸಂಸ್ಥೆಯ ಮಾಲೀಕರೊಂದಿಗೆ ಕಾಣಿಸಿಕೊಂಡಿದ್ದಾರೆ.

KAVYA3

ಗೃಹ ಸಚಿವ ರಾಮಲಿಂಗ ರೆಡ್ಡಿ ಹಾಗೂ ಮೂಡಬಿದಿರೆಯ ಶಾಸಕ ಅಭಯ್‍ಚಂದ್ರ ಜೈನ್ ಅವರು ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಜೊತೆ ಸೇರಿ ಮೀಟಿಂಗ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಈ ಫೋಟೋ ವಿವಾದವನ್ನು ಎಬ್ಬಿಸಿರುವುದಲ್ಲದೆ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಾ ಎಂಬ ಅನುಮಾನವನ್ನೂ ಸೃಷ್ಟಿಸಿದೆ.

KAVYA 6

ಕಳೆದ ಬುಧವಾರ ಮಂಗಳೂರು ಭೇಟಿಯಲ್ಲಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಗ್ನಿಶಾಮಕ ಠಾಣೆಯ ಉದ್ಘಾಟನೆಗಾಗಿ ಮೂಡಬಿದಿರೆಗೆ ಹೋಗಿದ್ದರು. ಈ ವೇಳೆ ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಹಾಗೂ ಮೋಹನ್ ಆಳ್ವ ಗೃಹ ಸಚಿವರನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅವರು ಏನು ಮಾತನಾಡಿದರು ಎಂದು ಯಾರಿಗೂ ಗೊತ್ತಿಲ್ಲ. ಆದರೆ ಕಾವ್ಯ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವ ಮಾತುಕತೆ ನಡೆದಿದೆ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅವರು ಮಾತುಕತೆ ನಡೆಸುತ್ತಿರೋ ಫೋಟೋಗಳಿಗೆ ತಮಗೆ ತೋಚಿದ ಹಾಗೆ ಬರಹವನ್ನು ಬರೆದು ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.

KAVYA 5

ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವಿನ ಪ್ರಕರಣ ದೊಡ್ಡ ಸದ್ದು ಮಾಡಿದೆ. ಈ ಸಾವಿನ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಸತ್ಯಾಂಶ ಕೂಡ ಹೊರಬಂದಿಲ್ಲ. ಕುಟುಂಬ ಮತ್ತು ಸಾರ್ವಜನಿಕರ ಸಂಶಯಗಳಿಗೆ ಉತ್ತರನೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಾಲೀಕ ಮೋಹನ್ ಆಳ್ವರೇ ಹಲವರ ಕಣ್ಣಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಈ ನಡುವೆಯೇ ಮೋಹನ್ ಆಳ್ವರನ್ನು ಗೃಹ ಸಚಿವ ರೆಡ್ಡಿ ಅವರು ಭೇಟಿಯಾಗಿ ಮಾತುಕತೆ ನಡೆಸಿರೋದು ಕಾವ್ಯ ಪರ ಹೋರಾಡುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೋರಾಟಗಾರ ದಿನಕರ್ ಶೆಟ್ಟಿ ತಿಳಿಸಿದ್ದಾರೆ.

KAVYA2

ಬುಧವಾರ ಗೃಹ ಸಚಿವರು ಮೋಹನ್ ಆಳ್ವ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಹೋಗಿದ್ದಾಗ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ನಾವು ಕೇಳಿಕೊಂಡಿದ್ದೇವು. ಆದರೆ ಅವರು ಕಾಟಾಚಾರಕ್ಕಷ್ಟೇ ಒಂದೆರಡು ನಿಮಿಷ ಮಾತನಾಡಿಸಿ ಸಮಯದ ಅಭಾವವಿದೆ ಅಂತ ಹೇಳಿ ಕಳುಹಿಸಿಬಿಟ್ರು ಎಂದು ಕಾವ್ಯಳ ತಾಯಿ ಬೇಬಿ ಪೂಜಾರಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

KAVYA1

ಕಾವ್ಯ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸದಿದ್ದರೆ ಶನಿವಾರ ಮಂಗಳೂರಿನಲ್ಲಿ ಅರೆಬೆತ್ತಲೆ ಹೋರಾಟ ಮಾಡುತ್ತೇವೆ ಎಂದು ಆಳ್ವಾಸ್ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *