ರಾಮನಗರ: ಹೋಮ್ ಕ್ವಾರೆಂಟೈನ್ ನಲ್ಲಿದ್ದ ಯುವಕ ಚನ್ನಪಟ್ಟಣ ನಗರದಲ್ಲಿ ಅನಾವಶ್ಯಕವಾಗಿ ಓಡಾಟ ನಡೆಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕುರಿತು ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಗರದ ಯುವಕನೋರ್ವ ಏಳು ದಿನಗಳ ಹಿಂದೆ ಸೌದಿಯಿಂದ ಆಗಮಿಸಿದ್ದ. ಆತನನ್ನು 14 ದಿನಗಳ ಕಾಲ ಮನೆಯಲ್ಲಿಯೇ ನಿಗಾದಲ್ಲಿರುವಂತೆ ತಾಲೂಕು ಆರೋಗ್ಯಾಧಿಕಾರಿಗಳು ಸೂಚಿಸಿದ್ದರು. ಆದರೆ ಹೋಮ್ ಕ್ವಾರೆಂಟೈನ್ ನಲ್ಲಿದ್ದ ಆತ ಮೆಡಿಕಲ್ ಸ್ಟೋರ್‍ಗೆ ಹೋಗುವುದಾಗಿ ನೆಪವೊಡ್ಡಿ ಮನೆಯಿಂದ ಹೊರಬಂದು ನಗರದಲ್ಲಿ ಬೇಕಾಬಿಟ್ಟಿ ಓಡಾಟ ನಡೆಸಿದ್ದಾನೆ. ಕೈಯಲ್ಲಿ ಸೀಲ್ ಇದ್ದರೂ ರಾಜರೋಷವಾಗಿ ತಿರುಗುತ್ತಿದ್ದ ಯುವಕನನ್ನು ಗಮನಿಸಿದ ಸಾರ್ವಜನಿಕರು ಆತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
Advertisement
Advertisement
ನಂತರ ಎಚ್ಚೆತ್ತುಕೊಂಡ ತಾಲೂಕು ಆರೋಗ್ಯಾಧಿಕಾರಿ, ಸ್ಥಳಕ್ಕೆ ಆಗಮಿಸಿ ಆತನಿಗೆ ವಾರ್ನಿಂಗ್ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಹೋಮ್ ಕ್ವಾರೆಂಟೈನ್ ನಲ್ಲಿರುವವರ ಬಗ್ಗೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.