ಹಿಜಬ್‌ ವಾಪಸ್‌- ಕಾನೂನು ಪರಿಶೀಲಿಸಿಯೇ ಕ್ರಮ: ಪರಮೇಶ್ವರ್‌

Public TV
1 Min Read

ಬೆಂಗಳೂರು: ಹಿಜಬ್‌ (Hijab) ವಿಚಾರದಲ್ಲಿ ಕಾನೂನು ಪರಿಶೀಲಿಸಿಯೇ ಕ್ರಮ ತಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಈಗ ಗೊತ್ತಾಗಿದೆ. ಪ್ರತಿಯೊಬ್ಬ ಪ್ರಜೆಗೂ ತಾನು ಏನು ಸೇವಿಸಬೇಕು ತಾನು ಏನು ಧರಿಸಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದು. ಈ ಹಕ್ಕು ಸಂವಿಧಾನದಲ್ಲೇ (Constitution) ಇದೆ. ಇದು ಅವರ ಮೂಲಭೂತ ಹಕ್ಕು. ಹಾಗಾಗಿ ಮುಖ್ಯಮಂತ್ರಿಗಳು ಆ ಅರ್ಥದಲ್ಲಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಧಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ: ಸಂಸದ ಅನಂತಕುಮಾರ್ ಹೆಗಡೆ

 

ಬಿಜೆಪಿಯವರು ಅದನ್ನೇ ಮೂಲವಾಗಿ ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ ಎಂಬುದು ನನ್ನ ಭಾವನೆ. ಕಾನೂನನ್ನು ಪರಿಶೀಲನೆ ಮಾಡಿಯೇ ಮಾಡುತ್ತೇವೆ. ಕಾನೂನನ್ನ ಬಿಟ್ಟು ಮಾಡುವುದಕ್ಕೆ ಹೋಗುವುದಿಲ್ಲ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದರು.

ನಾವು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದೇವೆ. ಎಲ್ಲಾ ಕಡೆ ಶಾಂತಿ ಇರಬೇಕು ಅಂತ ಹೇಳಿದ್ದೇವೆ ಅದನ್ನು ಮಾಡುತ್ತೇವೆ. ಸಮಾಜದಲ್ಲಿ ಅನೇಕ ವಿಚಾರಗಳು ಬಂದೇ ಬರುತ್ತೇವೆ. ಅದನ್ನು ಯಾವ ರೀತಿ ಹ್ಯಾಂಡಲ್ ಮಾಡುತ್ತೇವೆ ಎನ್ನುವುದು ಮುಖ್ಯ ಎಂದರು. ಇದನ್ನೂ ಓದಿ: ಕಲುಷಿತ ಕಾಂಗ್ರೆಸ್‌ಗೆ ಹಿಂದುತ್ವ ರುಚಿಸಲ್ಲ, ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪಲ್ಲ: ಜೆಡಿಎಸ್‌ ಕಿಡಿ

ನಾನು ಕೂಡ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಒಬ್ಬ ವ್ಯಕ್ತಿ ಎದ್ದು ನಿಂತುಕೊಂಡು ಹಿಜಬ್‌ ಏನು ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದ್ದ. ಅದಕ್ಕೆ ಸಿಎಂ ಉತ್ತರ ನೀಡಿದರು. ಬಿಜೆಪಿಯವರು ಚುನಾವಣೆ ಬರುತ್ತಿರುವುದರಿಂದ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದ್ದಾರೆ. ಇದಕ್ಕೂ ಮೊದಲು ಹಿಜಬ್‌ ಹಾಕಿಕೊಂಡು ಬರುವವರನ್ನು ಯಾರು ಕೇಳುತ್ತಿದ್ದರು. ಬಿಜೆಪಿಯವರೇ ಅದನ್ನು ಸೃಷ್ಟಿ ಮಾಡಿ ಈಗ ದೊಡ್ಡ ವಿಷಯ ಮಾಡಲು ಹೊರಟಿದ್ದಾರೆ ಎಂದು ದೂಷಿಸಿದರು.

Share This Article