ತುಮಕೂರು: ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಯಾವ ಲವ್ ಜಿಹಾದ್ ನನಗೆ ಕಾಣಿಸುತ್ತಿಲ್ಲ ಎಂದು ಹುಬ್ಬಳ್ಳಿ (Hubballi Murder) ಯುವತಿ ಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಪ್ರತಿಕ್ರಿಯೆ ನೀಡಿದರು.
ಪ್ರಕರಣ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನನಗೆ ಬಂದ ಮಾಹಿತಿ ಪ್ರಕಾರ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಯಾವಾಗ ಆ ಹೆಣ್ಣುಮಗಳು ದೂರ ಹೋಗಲು ಶುರು ಮಾಡಿದಳೋ ಆಗ ಹುಡುಗ ಹೋಗಿ ಚುಚ್ಚಿದ್ದಾನೆ. ಅದರಲ್ಲಿ ಲವ್ ಜಿಹಾದ್ ನನಗೆ ಕಾಣುತ್ತಿಲ್ಲ. ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ತಾಳೋ ಏನೋ ಅಂದುಕೊಂಡು ಹೀಗೆ ಮಾಡಿರಬಹುದು. ನನಗೆ ಇದರ ಪೂರ್ತಿ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯ ನೇಹಾ ಹತ್ಯೆಗೈದ ಫಯಾಜ್ ಕುಟುಂಬಸ್ಥರಿಗೆ ಪೊಲೀಸ್ ಭದ್ರತೆ
ಪರಸ್ಪರ ಪ್ರೀತಿ ಮೇಲೆ ಆಗಿರುವ ಘಟನೆ ಇದು. ಲವ್ ಜಿಹಾದ್ ಅನ್ನೋದು ಕಾಣುತ್ತಿಲ್ಲ. ಬಿಜೆಪಿಯವರು ಸ್ವಾಭಾವಿಕವಾಗಿ ಇಂತಹ ವಿಚಾರದಲ್ಲಿ ಕಾಂಗ್ರೆಸ್‌ನ್ನು ದೂಷಣೆ ಮಾಡೋದು ಅವರ ಕೆಲಸ. ಅದು ಅಷ್ಟು ಸಮಂಜಸ ಅಲ್ಲ. ನಾವು ಕಾನೂನು ಪ್ರಕಾರ ಕಂಟ್ರೋಲ್ ಮಾಡ್ತೀವಿ. ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡೋದು ಈ ಚುನಾವಣೆ ಸಂದರ್ಭದಲ್ಲಿ ಒಳ್ಳೆದಲ್ಲ. ಹೀಗೆ ತನಿಖೆ ಮಾಡಿ, ಈ ಸೆಕ್ಸನ್ನೇ ಹಾಕಿ ಎಂದು ಅವರು ಹೇಳೋಕೆ ಆಗಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೆಕ್ಸನ್ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಗದಗದಲ್ಲಿ ನಾಲ್ವರ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ಈಗಾಗಲೇ ಇಲಾಖೆಯವರು ಗಮನ ಹರಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇರಲಿಕ್ಕಿಲ್ಲ. ನಾವು ಪರಿಶೀಲನೆ ಮಾಡಿ ಅದರ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಯುವತಿ ಹತ್ಯೆ ಖಂಡಿಸಿ ಭುಗಿಲೆದ್ದ ಆಕ್ರೋಶ; ವಿದ್ಯಾರ್ಥಿಗಳು, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರು ಜೋಡಿ ಕೊಲೆ ಬಗ್ಗೆ ಪ್ರತಿಕ್ರಿಯಿಸಿ, ನಿನ್ನೆ ಬೆಂಗಳೂರಿನಲ್ಲಿ 2 ಕೊಲೆಯಾಗಿದೆ. ಇಬ್ಬರು ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಲವ್ ಅಫೇರ್ ಇತ್ತು. ಕೆಲ ಕಾರಣಗಳಿಂದ ಯುವತಿ ಹುಡಗನಿಂದ ದೂರುವಾಗುವ ನಿರ್ಧಾರ ಮಾಡಿದ್ದಾಳೆ. ಅದಕ್ಕೆ ಯುವಕ ಕೊಲೆ ಮಾಡಿದ್ದಾನೆ. ಇದೇ ವೇಳೆ ಅಲ್ಲೆ ಇದ್ದ ತಾಯಿ ಅವನ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ ಎಂದು ತಿಳಿಸಿದರು.
ಇಂಥಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರು ಘಟನೆಯಲ್ಲಿ ವೀಕ್ ಸೆಕ್ಸನ್ ಹಾಕಲಾಗಿದೆ ಎಂಬ ಆರೋಪವಿದೆ. ಪ್ರಾರಂಭದಲ್ಲಿ ಯಾವ ಪ್ರಕರಣ ದಾಖಲಿಸಿಕೊಳ್ಳಬೇಕೋ ಅದನ್ನು ದಾಖಲು ಮಾಡಲಾಗಿದೆ. ತನಿಖೆ ಹಂತದಲ್ಲಿ ಯಾವುದನ್ನು ಆಡ್ ಮಾಡಬೇಕೋ ಅದನ್ನು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಗುದ್ದಿ ಹತ್ಯೆ ಮಾಡಿದ್ದಾರೆ – ಕೊಡಗಿನಲ್ಲಿ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಆಕ್ರೋಶ
ಯಾರು ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಾರೋ, ಅವರು ಯಾವುದೇ ಸಮುದಾಯ ಆಗಲಿ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಓಲೈಸುವ ಕೆಲಸ ನಾವು ಯಾವತ್ತೂ ಮಾಡೋದಿಲ್ಲ. ನಾವು ಸಮಾಜವನ್ನು ಶಾಂತಿಯಿಂದ ಇಡಬೇಕು ಅನ್ನೋದೆ ನಮ್ಮ ಉದ್ದೇಶ ಎಂದರು.