ಬೆಂಗಳೂರು: ಡಿ.ಕೆ.ಶಿವಕುಮಾರ್ (D.K Shivakumar) ಅವರನ್ನು ಅಧಿಕಾರದಿಂದ ಕೆಳಗಿಳಿಸೋಕೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಪ್ಲಾನ್ ಮಾಡಿದ್ದಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ (R.Ashoka) ಹೇಳಿಕೆ ದುರುದ್ದೇಶ ಪೂರ್ವಕವಾದದ್ದು. ಬಿಜೆಪಿಯವರಿಗೆ (BJP) ಕೆಲಸ ಇಲ್ಲ, ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮನೆಗೆ ಬರುವುದು, ನಾನು ಅವರ ಮನೆಗೆ ಹೋಗುವುದು ಸ್ವಾಭಾವಿಕ ಪ್ರಕ್ರಿಯೆ. ಅವರು ಹೇಳುವ ರೀತಿ ಯಾವುದೇ ಚರ್ಚೆ ಆಗಿಲ್ಲ. ನಾವು ಡಿ.ಕೆ ಶಿವಕುಮಾರ್ ಅವರ ಕೇಸ್ ವಿಥ್ ಡ್ರಾ ಮಾಡಿರುವುದಕ್ಕೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಡಿಕೆಶಿ ಅವರ ಕೇಸ್‍ನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಲೋಕಾಯುಕ್ತಕ್ಕೆ ಕೊಟ್ಟು ತನಿಖೆ ಮಾಡಿಸಬಹುದಿತ್ತು. ಆಗ ಮಾಡದೇ ಈಗ ನಮ್ಮ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸರ್ಕಾರದ ವಿರುದ್ಧ ಆರೋಪ ಮಾಡೋದು ಬಿಟ್ಟು, ಬೇರೆ ಯಾವ ಕೆಲಸವೂ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಿಖಿಲ್, ವಿಜಯೇಂದ್ರ ಸಹೋದರ ಮನೋಭಾವದಲ್ಲಿ ಒಟ್ಟಿಗೆ ಹೋಗ್ತಾರೆ: ಹೆಚ್‌ಡಿಕೆ
ಲೋಕಸಭಾ ಚುನಾವಣೆ ಮುಗಿದ ಮೇಲೆ ಸರ್ಕಾರ ಬೀಳಲಿದೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದ ಜನರು ಸ್ಪಷ್ಟ ಬಹುಮತದೊಂದಿಗೆ 135 ಸ್ಥಾನಗಳನ್ನು ಕೊಟ್ಟು ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ನಾವು ನುಡಿದಂತೆ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಮನೆಗೆ 2 ಸಾವಿರ ರೂ. ಕೊಡುತ್ತಿದ್ದೇವೆ. ಇದರಲ್ಲಿ ಯಾರೂ ಮಧ್ಯವರ್ತಿಗಳಿಲ್ಲ. ಕಾಂಗ್ರೆಸ್ ಸರ್ಕಾರದ ಏಳಿಗೆಯನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಸರ್ಕಾರ ಸುಭದ್ರವಾಗಿರುವುದನ್ನು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಹೀಗಾಗಿ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಜನ ಆಶೀರ್ವಾದ ಮಾಡಿದ್ದಾರೆ, ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯಲಿ – ಶ್ರೀರಾಮುಲು