– ಸ್ವತಃ ವಾಹನಗಳ ಪಾಸ್‍ಚೆಕ್ ಮಾಡಿದ ಕಮೀಷನರ್
ಬೆಂಗಳೂರು: ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಕೂಡ ಲಾಕ್‍ಡೌನ್ ಅನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎನ್ನುವ ಬಗ್ಗೆ ಸ್ವತಃ ಗೃಹಮಂತ್ರಿಗಳು ಹಾಗೂ ಬೆಂಗಳೂರು ಕಮಿಷನರ್ ಖುದ್ದು ಚೆಕ್ ಪೋಸ್ಟ್ ಹಾಗೂ ಬಾರ್ಡರ್‌ಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ನಕಲಿ ಪಾಸ್‍ಗಳನ್ನು ಬಳಸಿ ಹಾಗೂ ಅನವಶ್ಯಕವಾಗಿ ಓಡಾಟ ಮಾಡುತ್ತಿದ್ದವರ ಪಾಸ್‍ಗಳನ್ನು ವಶಕ್ಕೆ ಪಡೆದು ವಾಹನಗಳನ್ನು ಸೀಜ್ ಮಾಡಿದ್ದಾರೆ.
ದೇಶಾದ್ಯಂತ ಲಾಕ್‍ಡೌನ್ ಹೇರಿದರೂ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಮಿಳುನಾಡು ಕೂಡ ಹೊರತಲ್ಲ. ಈ ಹಿನ್ನೆಲೆಯಲ್ಲಿ ಖುದ್ದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕಮಿಷನರ್ ಭಾಸ್ಕರ್ ರಾವ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಕರ್ನಾಟಕ-ತಮಿಳುನಾಡು ಗಡಿ ಅತ್ತಿಬೆಲೆಗೆ ದಿಢೀರ್ ಭೇಟಿ ನೀಡಿದ್ದಾರೆ. ಖುದ್ದು ಕಮೀಷನರ್ ವಾಹನಗಳ ತಪಾಸಣೆ ಮಾಡಿದ್ದಾರೆ.
ಕರ್ನಾಟಕದ ಅತ್ತಿಬೆಲೆ ಗಡಿ ಭಾಗದಲ್ಲಿ ತಮಿಳುನಾಡಿನ ಪೊಲೀಸರು ಚೆಕ್ ಪೋಸ್ಟ್ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಫುಲ್ ಗರಂ ಆಗಿದ್ದರು. ತಕ್ಷಣ ತಮಿಳುನಾಡು ಪೊಲೀಸರನ್ನು ಅವರ ಗಡಿಯಲ್ಲಿ ಚೆಕ್‍ಪೋಸ್ಟ್ ಹಾಕಿಕೊಳ್ಳುವಂತೆ ಸೂಚಿಸಿ ಎತ್ತಂಗಡಿ ಮಾಡಿಸಿದ್ದಾರೆ.
ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಮುಖ್ಯ ರಸ್ತೆಯ ಚೆಕ್ ಪೋಸ್ಟ್ ಗಳನ್ನು ತಪಾಸಣೆ ಮಾಡಿದರು. ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಸಾಕಷ್ಟು ನಕಲಿ ಪಾಸ್‍ಗಳಿರುವ ವಾಹನ ಸವಾರರು ಓಡಾಟ ನಡೆಸಿ, ಸಿಕ್ಕಿಬಿದ್ದಿದ್ದಾರೆ. ಅಂತಹ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.
ಲಾಕ್‍ಡೌನ್ ಪಾಲನೆ ಮಾಡದೇ ಬೀದಿಗಿಳಿಯುತ್ತಿರುವ ವಾಹನ ಸವಾರರಿಗೆ ಖುದ್ದು ಗೃಹ ಸಚಿವರು ಮತ್ತು ಬೆಂಗಳೂರು ಕಮೀಷನರ್ ರಿಯಾಲಿಟಿ ಚೆಕ್ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.