ನವದೆಹಲಿ: ಭಾರತದ ಗಡಿ ಮತ್ತು ವಿಮಾನ ನಿಲ್ದಾಣಗಳಲ್ಲಿನ ಭದ್ರತೆ ಹೇಗಿದೆ ಎಂದು ಎಲ್ಲಾ ಗಡಿ ಕಾವಲು ಪಡೆಗಳ ಮಹಾನಿರ್ದೇಶಕರೊಂದಿಗೆ ಕೇಂದ್ರ ಗೃಹ ಸಚಿವ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಜಾಗರೂಕತೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಭಾರತದ ಜಮ್ಮು ಪ್ರದೇಶ ಮತ್ತು ಸತ್ವಾರಿ, ಸಾಂಬಾ, ಆರ್‌ಎಸ್ ಪುರ, ಅರ್ನಿಯಾ ಮತ್ತು ಜೈಸಲ್ಮೇರ್ ಸೇರಿದಂತೆ ರಾಜಸ್ಥಾನವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸನ್ನದ್ಧತೆ ಮತ್ತು ಕಾರ್ಯಾಚರಣೆಯನ್ನು ನಿರ್ಣಯಿಸುವುದು ಈ ಸಭೆಯ ಉದ್ದೇಶವಾಗಿತ್ತು. ಆದಾಗ್ಯೂ, ಎಲ್ಲಾ ಕ್ಷಿಪಣಿಗಳನ್ನು ವಾಯು ರಕ್ಷಣಾ ಘಟಕಗಳು ಹೊಡೆದುರುಳಿಸಿವೆ. ಪಾಕ್ ನಡೆಸಿದ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಭಾರತೀಯ ಸೇನೆ ದೃಢಪಡಿಸಿದೆ.
ದೇಶಾದ್ಯಂತ ವಿಮಾನ ನಿಲ್ದಾಣಗಳ ಭದ್ರತಾ ಕ್ರಮಗಳನ್ನು ಮೌಲ್ಯಮಾಪನ ಮಾಡಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮಹಾನಿರ್ದೇಶಕರ ಜೊತೆ ಪ್ರತ್ಯೇಕ ಸಂವಾದದಲ್ಲಿ ಅಮಿತ್ ಶಾ ಸೂಚಿಸಿದ್ದಾರೆ.
ಪ್ರಮುಖ ಮೂಲಸೌಕರ್ಯ ಕೇಂದ್ರಗಳಲ್ಲಿ ಹೆಚ್ಚಿನ ಜಾಗರೂಕತೆಯ ಮಧ್ಯೆ ಈ ಪರಿಶೀಲನೆ ನಡೆದಿದೆ. ಸೈನಿಕರ ಹೆಚ್ಚಿನ ಜಾಗರೂಕತೆಯನ್ನು ಕಾಯ್ದುಕೊಳ್ಳುವ ಮಹತ್ವವನ್ನು ಗೃಹ ಸಚಿವರು ಒತ್ತಿ ಹೇಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.