ಕಿಚ್ಚ ಸುದೀಪ್ (Sudeep) ಮತ್ತು ಹೊಂಬಾಳೆ ಫಿಲ್ಮ್ಸ್ (Hombale Films) ಕಾಂಬಿನೇಷನ್ ನಲ್ಲಿ ಸಿನಿಮಾ ಬರತ್ತಾ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇದೆ. ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ಸಿನಿಮಾ ಮಾಡುವ ಸಂಕಲ್ಪ ಹೊಂದಿರುವ ನಿರ್ಮಾಪಕ ವಿಜಯ್ ಕಿರಗಂದೂರ್ (Vijay Kirgandur), ಕಿಚ್ಚನಿಗಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದೀಗ ನಿಜವಾಗಿಯೂ ಕಾಲ ಕೂಡ ಬಂದಿದೆಯಾ ಎನ್ನುವ ಅನುಮಾನ ಮೂಡಿದೆ.
ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬಂದ ‘ಕಾಂತರ’ (Kantara) ಸಿನಿಮಾದ ಬಗ್ಗೆ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಮೆಚ್ಚುಗೆಯನ್ನು ಸೂಚಿಸಿದ್ದರು. ಅದರಲ್ಲೂ ಸುದೀಪ್ ಪುತ್ರಿ ಸಾನ್ವಿ ತುಸು ಹೆಚ್ಚೇ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ಅದೇ ಹೊಂಬಾಳೆ ಫಿಲ್ಮ್ಸ್ ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಈ ವಿಷಯವನ್ನು ಅವರು ಮಧ್ಯರಾತ್ರಿ 11.42ಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಸುದೀಪ್ ಮತ್ತು ಕಾರ್ತಿಕ್ ಭೇಟಿಯ ಹಿಂದಿನ ವಿಚಾರವನ್ನು ಕಾರ್ತಿಕ್ ಹಂಚಿಕೊಳ್ಳದೇ ಕೇವಲ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ, ಫೋಟೋ ಜೊತೆ ‘ಹೊಸ ಆರಂಭಕ್ಕೆ ಸುದೀಪ್ ಸರ್’ ಎಂದು ಬರೆದುಕೊಂಡಿದ್ದಾರೆ. ಈ ಬರಹವೇ ನಾನಾ ಚರ್ಚೆಗೆ ಕಾರಣವಾಗಿದೆ. ಹೊಸ ಆರಂಭ ಎನ್ನುವುದು ಕಿಚ್ಚನ ಸಿನಿಮಾಗೆ ಮುನ್ನುಡಿಯಾ ಎನ್ನುವ ಪ್ರಶ್ನೆ ಕೂಡ ಹುಟ್ಟು ಹಾಕಿದೆ. ಇದನ್ನೂ ಓದಿ:ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ
ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ಮತ್ತೊಂದು ಸಿನಿಮಾ ಒಪ್ಪಿಕೊಂಡಿಲ್ಲ. ಮತ್ತೆ ಅನೂಪ್ ಭಂಡಾರಿ ಅವರೇ ಕಿಚ್ಚನಿಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈವರೆಗೂ ಆ ಸಿನಿಮಾದ ಕುರಿತು ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಈ ಮಧ್ಯೆ ಸುದೀಪ್ ಮತ್ತು ಕಾರ್ತಿಕ ಭೇಟಿ ಕುತೂಹಲವನ್ನಂತೂ ಮೂಡಿಸಿದೆ. ಮುಂದಿನ ದಿನಗಳಲ್ಲಿ ಫೋಟೋ ಹಿಂದಿನ ಸತ್ಯ ಕೂಡ ಹೊರ ಬೀಳಲಿದೆ.