ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ (Kantara) ಪ್ರಿಕ್ವೆಲ್ ಚಿತ್ರಕ್ಕೆ ಒಬ್ಬೊಬ್ಬರೆ ಜೊತೆಯಾಗುತ್ತಿದ್ದಾರೆ. ಅದರಲ್ಲೂ ಹಾಲಿವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ಕಾಂತಾರಗಾಗಿ ಕೆಲಸ ಮಾಡಲಿದ್ದಾರೆ. ಆರ್.ಆರ್.ಆರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದ ಆಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್ (Todar Lazarov), ಇದೀಗ ಕಾಂತಾರ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ. ಆ ನಿಮಿತ್ತ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಆಗಮಿಸಿದ್ದಾರೆ. ರಿಷಬ್ ಶೆಟ್ಟಿಯನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಈ ಹಿಂದೆ ‘ಕಾಂತಾರ’ ಪ್ರೀಕ್ವೆಲ್ ಟೀಮ್ ನಿಂದ ಮತ್ತೊಂದು ಹೊಸ ಸುದ್ದಿ ಬಂದಿತ್ತು. ಸದ್ದಿಲ್ಲದೇ ರಿಷಬ್ ಆಯಾ ಹಂತದ ಚಿತ್ರೀಕರಣದಲ್ಲಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಸಿನಿಮಾದ ಮಹತ್ವದ ಪಾತ್ರವೊಂದನ್ನು ಮಾಲಿವುಡ್ ನಟ ಜಯರಾಮ್ (Jayaram) ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದಲ್ಲೂ ನಟಿಸಿದ್ದರು.
‘ಕಾಂತಾರ’ ಸಕ್ಸಸ್ ನಂತರ ಮೊದಲಿಗಿಂತ ಜವಾಬ್ದಾರಿ ಹೆಚ್ಚಾಗಿದೆ. ನಮ್ಮ ಸಿನಿಮಾಗಾಗಿ ದೊಡ್ಡ ತಂಡ ಕೆಲಸ ಮಾಡುತ್ತಿದೆ ಎಂದಿದ್ದರು ರಿಷಬ್. ಹೊಂಬಾಳೆ ಸಂಸ್ಥೆ ಸಿಕ್ಕಿರುವುದು ಫಿಲ್ಮ್ ಮೇಕರ್‌ಗೆ ಒಂದು ಪುಣ್ಯ ಎಂದು ರಿಷಬ್ ಖುಷಿಯಿಂದ ಮಾತನಾಡಿದ್ದರು. ಕಾಂತಾರಗಾಗಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ ಎಂದು ರಿಷಬ್ ಹೇಳಿದ್ದರು.
ಜನ ‘ಕಾಂತಾರ’ ಚಿತ್ರವನ್ನು ಗೆಲ್ಲಿಸಿದ್ದಾರೆ ಬಾಯಲ್ಲಿ ಏನು ಹೇಳಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ. ನನಗೆ ಯಾವ ಒತ್ತಡವು ಇಲ್ಲ. ಆಗ ನನಗೆ ಬಹಳ ದೊಡ್ಡ ಚಿತ್ರವಾಗಿತ್ತು. ಸಿನಿಮಾ ಯಾವಾಗಲೂ ಕಲಿಯುವ ಪ್ರೊಸೆಸ್ ಅದನ್ನು ಮಾಡುತ್ತಿದ್ದೇನೆ ಎಂದಿದ್ದರು ರಿಷಬ್.