– 2 ದಿನ ರೆಡ್ ಅಲರ್ಟ್ ಘೋಷಣೆ
ಮಡಿಕೇರಿ: ಕೊಡಗು (Kodagu) ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜು.18 ಮತ್ತು 19 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 10 ಇಂಚು ಮಳೆ ಸುರಿದಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯ ಭಾಗಮಂಡಲದಲ್ಲಿ 7 ಇಂಚು ಮಳೆಯಾಗಿದೆ.
Advertisement
ಶಾಲೆಗಳಿಗೆ ರಜೆ
ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜು.18 ರಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗನವಾಡಿ ಹಾಗೂ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಜೆ ಘೋಷಿಸಿದ್ದಾರೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1347.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 594.88 ಮಿ.ಮೀ ಮಳೆಯಾಗಿತ್ತು. ಇದನ್ನೂ ಓದಿ: ಉಡುಪಿಯ ಹಲವೆಡೆ ನೆರೆ ಪರಿಸ್ಥಿತಿ; ಹಾಸನ, ಕೊಡಗಿನನಲ್ಲಿ ಭೂಕುಸಿತದ ಅವಾಂತರ; ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ!
Advertisement
Advertisement
ಬ್ರಹ್ಮಗಿರಿಯ ತಪ್ಪಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಏರ್ಪಟ್ಟಿರುವ ಕಾವೇರಿಯ ಪ್ರವಾಹದಿಂದ ನದಿ ಪಾತ್ರದ ಹಲ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಬಿರುಮಳೆಯಿಂದ ಜಿಲ್ಲೆಯಾದ್ಯಂತ ಅವಘಡಗಳ ಸರಮಾಲೆ ಮುಂದುವರೆದಿದೆ. ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕಿರು ತೊರೆಗಳು ಉಕ್ಕಿ ಹರಿದು ಕಾವೇರಿಯ ಪ್ರವಾಹದ ಮಟ್ಟ ಮತ್ತಷ್ಟು ಹೆಚ್ಚಿದೆ. ಭಾಗಮಂಡಲದ ಅಯ್ಯಂಗೇರಿ ರಸ್ತೆ ಹಾಗೂ ಮಡಿಕೇರಿಯನ್ನು ಸಂಪರ್ಕಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಗ್ರಾಮೀಣರ ಬದುಕು ಅಸ್ತವ್ಯಸ್ತಗೊಂಡಿದೆ.
Advertisement
ಸೇತುವೆ ಮುಳುಗಡೆ
ದಕ್ಷಿಣ ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದು ಪ್ರವಾಹ ಏರ್ಪಟ್ಟಿದೆ. ಇದರ ಪರಿಣಾಮ ಶ್ರೀಮಂಗಲ-ನಾರಿ ಸೇತುವೆ ಮುಳುಗಡೆಯಾಗಿದ್ದು, ಸಮಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯ ಬೇತ್ರಿ ಸೇತುವೆ ಮೇಲೆ ನೀರು ಬರಲು ಇನ್ನು ಕೆಲವೆ ಅಡಿ ಬಾಕಿ ಉಳಿದಿದೆ. ಮಳೆಯ ಪ್ರಮಾಣ ಹೆಚ್ಚಿದಲ್ಲಿ ಸೇತುವೆ ಮುಳುಗಡೆಯಾಗುವ ಸಂಭವವಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ದುರಂತ – ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್‌ಡಿಕೆ
ಕಾವೇರಿ ನದಿ ಪಾತ್ರದಲ್ಲಿ ಬರುವ ನಾಪೋಕ್ಲುವಿನಿಂದ ಮೂರ್ನಾಡುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ, ರಸ್ತೆಯ ಮೇಲೆ 4 ಅಡಿಯಷ್ಟು ಪ್ರವಾಹದ ನೀರು ಆವರಿಸಿದ್ದು, ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಾಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಈ ಹಿನ್ನೆಲೆ ವಾಹನ ಸಂಚಾರ ನಾಪೋಕ್ಲು, ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ, ಹೊದ್ದೂರು ಬಳಸು ಹಾದಿಯನ್ನು ಅವಲಂಬಿಸುವಂತಾಗಿದೆ. ನಾಪೋಕ್ಲು-ಕೊಟ್ಟಮುಡಿ ಬೆಟ್ಟಗೇರಿ ಮಡಿಕೇರಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಮಳೆಯ ಅಬ್ಬರ ಇದೇ ರೀತಿ ಮುಂದುವರೆದರೆ ನಾಪೋಕ್ಲು- ಕೊಟ್ಟಮುಡಿ ಸಂಪರ್ಕ ರಸ್ತೆ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ.