ನವದೆಹಲಿ: ಉತ್ತಮ ಲಯದಲ್ಲಿರುವ ಭಾರತ ತಂಡದ ಉಪನಾಯಕ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ-20 ಯಲ್ಲಿ ದಾಖಲೆಯ ವೀರನಾಗಿ ಮಿಂಚುತ್ತಿದ್ದಾರೆ.
ಇಂಗ್ಲೆಂಡ್‍ನಲ್ಲಿ ನಡೆದ 2019 ರ ವಿಶ್ವಕಪ್‍ನಲ್ಲಿ 5 ಶತಕಗಳನ್ನು ಬಾರಿಸಿದ ರೋಹಿತ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಹೊಡೆದ ಆಟಗಾರ ಆಗಿದ್ದರು. ಈಗ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಭಾನುವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಗೆದ್ದಿದೆ. ಈ ಪಂದ್ಯದಲ್ಲಿ ರೋಹಿತ್ 51 ಎಸೆತಗಳಲ್ಲಿ 61 ರನ್ ಹೊಡೆಯುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
Advertisement
Advertisement
ಈ ಮೂಲಕ ಒಟ್ಟಿ 96 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಒಟ್ಟು 2,422 ರನ್ ಹೊಡೆಯುವ ಮೂಲಕ ಈ ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ಅದನ್ನು ಬಿಟ್ಟರೆ 2,310 ರನ್ ಹೊಡೆದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ 2,272 ರನ್ ಹೊಡೆದಿರುವ ನ್ಯೂಜಿಲೆಂಡ್‍ನ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಅವರು ಇದ್ದಾರೆ.
Advertisement
Advertisement
ಇದರ ಜೊತೆ ಅಂತಾರಾಷ್ಟ್ರೀಯ ಟಿ-20ಯಲ್ಲಿ ಅತೀ ಹೆಚ್ಚು ಶತಕ ಸಿಡಿರುವವರ ಪಟ್ಟಿಯಲ್ಲೂ ಮುಂಚೂಣಿಯಲ್ಲಿರುವ ರೋಹಿತ್ ಶರ್ಮಾ ಒಟ್ಟು 4 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ರೋಹಿತ್ ನಂತರ ತಲಾ ಮೂರು ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‍ವೆಲ್ ಮತ್ತು ನ್ಯೂಜಿಲೆಂಡ್‍ನ ಕಾಲಿನ್ ಮನ್ರೋ ನಂತರದ ಸ್ಥಾನದಲ್ಲಿ ಇದ್ದಾರೆ.
ಒಟ್ಟು 225 ಬೌಂಡರಿಯನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಅವರು ಟಿ-20 ಮಾದರಿಯಲ್ಲಿ ಅತೀ ಹೆಚ್ಚು ಬೌಂಡರಿ ಸಿಡಿಸಿದ ಆಟಗಾರ ಆಗಿದ್ದಾರೆ. ಆದರೆ ಸಿಕ್ಸರ್ ಮತ್ತು ಬೌಂಡರಿಯನ್ನು ಕೂಡಿಸಿ ಲೆಕ್ಕ ಹಾಕಿದರೆ 215 ಬೌಂಡರಿ ಮತ್ತು 107 ಸಿಕ್ಸರ್ ಸಿಡಿಸಿರುವ ರೋಹಿತ್ ಒಟ್ಟು 322 ಬೌಂಡರಿ ಮತ್ತು ಸಿಕ್ಸರ್‍ನೊಂದಿಗೆ ಅಗ್ರಸ್ಥಾನಕ್ಕೆ ಬರಲಿದ್ದಾರೆ. ರೋಹಿತ್ ಶರ್ಮಾ ನಂತರ ಒಟ್ಟು 303 ಬೌಂಡರಿ ಮತ್ತು ಸಿಕ್ಸರ್ ಸಿಡಿಸಿರುವ ಮಾರ್ಟಿನ್ ಗುಪ್ಟಿಲ್ ಎರಡನೇ ಸ್ಥಾನದಲ್ಲಿ ಇದ್ದಾರೆ.
ಭಾನುವಾರ ನಡೆದ ವೆಸ್ಟ್ ಇಂಡೀಸ್ ನಡುವಿನ ಟಿ-20 ಪಂದ್ಯದಲ್ಲಿ 6 ಸಿಕ್ಸರ್‍ನೊಂದಿಗೆ ಭರ್ಜರಿ ಅರ್ಧಶತಕ ಸಿಡಿಸಿದ ರೋಹಿತ್ ಟಿ-20 ಕ್ರಿಕೆಟ್‍ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ (105) ಅವರ ದಾಖಲೆ ಮುರಿದು ಒಟ್ಟು 107 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿ ಇದ್ದಾರೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ರೋಹಿತ್ ಚುಟುಕು ಪಂದ್ಯದಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.