ದಾವಣಗೆರೆ: ರಾಜ್ಯದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಉಚ್ಚಂಗಿಯಲ್ಲಮ್ಮ ದೇವಿಯ ಪಾದುಗಟ್ಟೆ ದೇವಸ್ಥಾನವನ್ನು ಇಂದು ತೆರವು ಮಾಡಲಾಯಿತು.
ಉಚ್ಚಂಗಿದುರ್ಗ ಗ್ರಾಮದ ಮಧ್ಯದಲ್ಲಿರುವ ಉಚ್ಚಂಗಿದೇವಿಯ ಪಾದುಗಟ್ಟೆ ದೇವಸ್ಥಾನ ರಸ್ತೆ ಬದಿಯಲ್ಲಿ ಇತ್ತು. ಹರಪ್ಪನಹಳ್ಳಿ ಹಾಗೂ ಉಚ್ಚಂಗಿ ದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ದೇವಾಲಯವಿದೆ. ಹೀಗಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅಲ್ಲದೆ ಸುಪ್ರೀಂಕೋರ್ಟ್ ನ ಆದೇಶದ ಪ್ರಕಾರ ಇಂದು ತಹಶೀಲ್ದಾರ್ ಹಾಗೂ ಪೊಲೀಸರ ಭದ್ರತೆಯಲ್ಲಿ ದೇವಸ್ಥಾನವನ್ನು ಜೆಸಿಬಿ ಮುಖಾಂತರ ತೆರವುಗೊಳಿಸಿದರು.
ನೂರಾರು ವರ್ಷಗಳ ಇತಿಹಾಸವಿರುವ ಉಚ್ಚಂಗಿ ದೇವಿಯ ದೇವಸ್ಥಾನ ಗುಡ್ಡದ ಮೇಲಿದ್ದು, ಆ ದೇವಿಯ ಪಾದಗಟ್ಟೆ ಗ್ರಾಮದ ಮಧ್ಯ ಇತ್ತು. ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನದಂದು ನೂರಾರು ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಈಗ ಏಕಾಏಕಿ ದೇವಸ್ಥಾನ ತೆರವು ಮಾಡಲು ಸುಪ್ರೀಂಕೋರ್ಟ್ ಆದೇಶ ಬರುತ್ತಿದ್ದಂತೆ ಭಕ್ತರು ಹಾಗೂ ಗ್ರಾಮಸ್ಥರು ವಿರೋಧ ಮಾಡಿದರು.
ಜಿಲ್ಲಾಧಿಕಾರಿಗಳು, ಎಸ್.ಪಿ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ಮೀರಲು ಸಾಧ್ಯವಿಲ್ಲ ಎಂದು ಭಕ್ತರು ಹಾಗೂ ಗ್ರಾಮಸ್ಥರ ಮನವೊಲಿಸಿದ್ದರು. ಇಂದು ಬೆಳಗ್ಗೆಯಿಂದಲೇ ಜೆಸಿಬಿ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಈ ರೀತಿಯಾಗಿ ನೆಲಸಮ ಆಗಿರುವುದಕ್ಕೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು.