– ದೇವಸ್ಥಾನಕ್ಕೆ ಆಡಳಿತಧಿಕಾರಿ ನೇಮಕ ಸಹ ರದ್ದು
ಬೆಂಗಳೂರು: ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಐತಿಹಾಸಿಕ ಗಾಳಿ ಆಂಜನೇಯಸ್ವಾಮಿ ದೇವಸ್ಥಾನವನ್ನ (Gali Anjaneya Swamy Temple) ಮುಜರಾಯಿ ಇಲಾಖೆಯ ಸುಪರ್ದಿಗೆ ಒಪ್ಪಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ದೇವಸ್ಥಾನವನ್ನ ಮತ್ತೆ ಟ್ರಸ್ಟ್ ವ್ಯಾಪ್ತಿಗೆ ನೀಡುವಂತೆ ಆದೇಶಿಸಿದೆ.
ಹೌದು. ಹುಂಡಿ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, 2025ರ ಜುಲೈ 8ರಂದು ರಾಜ್ಯ ಸರ್ಕಾರ ದೇವಸ್ಥಾನವನ್ನ ಮುಜರಾಯಿ ಇಲಾಖೆಯ ಸುಪರ್ದಿಗೆ ಒಪ್ಪಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ದೇವಸ್ಥಾನದ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು.

ದೇವಸ್ಥಾನದ ಟ್ರಸ್ಟಿ ಸಂಚಾಲಕ ಬಿ.ಪಿ ನಾಗರಾಜು ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ವಕೀಲ ಡಿ.ವಿ. ಶಂಕರ್ ವಾದ ಮಂಡಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ವಾದ-ಪ್ರತಿವಾದಗಳನ್ನು ಆಲಿಸಿ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿತ್ತು. ಇದೀಗ ದೇವಸ್ಥಾನವನ್ನು ಮುಜರಾಯಿ ಇಲಾಖೆಯ (Muzrai Department) ಸುಪರ್ದಿಗೆ ಪಡೆದಿದ್ದ ಸರ್ಕಾರದ ಆದೇಶದಲ್ಲಿ ಕಾನೂನು ಲೋಪವಿರುವುದನ್ನ ಪರಿಗಣಿಸಿ, ಆ ಆದೇಶವನ್ನು ರದ್ದುಗೊಳಿಸಿದೆ.
ಇದರೊಂದಿಗೆ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶವನ್ನೂ ನ್ಯಾಯಾಲಯ ರದ್ದುಗೊಳಿಸಿದೆ. ಒಂದು ವಾರದೊಳಗೆ ಆಡಳಿತಾಧಿಕಾರಿಯು ದೇವಸ್ಥಾನಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನ ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕು ಎಂದು ನಿರ್ದೇಶನ ನೀಡಿದೆ.
ಆದರೆ, ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಿ, ಸಂಬಂಧಪಟ್ಟ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.
