ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ (Rajath), ವಿನಯ್ (Vinay Gowda) ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಸ್ಪರ್ಧಿ ವಿವಾದಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಭಾವನೆಗೆ ರಕ್ಷಕ್ ಬುಲೆಟ್ (Rakshak Bullet) ಧಕ್ಕೆಯುಂಟು ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ದೂರು ದಾಖಲಿಸಲು ಮುಂದಾಗಿವೆ. ರಿಯಾಲಿಟಿ ಶೋನಲ್ಲಿ ರಕ್ಷಕ್ ಅವರು ತಮ್ಮ ಡೈಲಾಗ್ ಮೂಲಕ ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಇದನ್ನೂ ಓದಿ:ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು
ಕನ್ನಡದ ಹಿರಿಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ರಿಯಾಲಿಟಿ ಶೋವೊಂದರ ಸ್ಕಿಟ್‌ವೊಂದರಲ್ಲಿ ತಾಯಿ ಚಾಮುಂಡೇಶ್ವರಿ ವಿಚಾರ ಸಂಬಂಧ ಹೇಳಿದ್ದ ಡೈಲಾಗ್ ಒಂದು ವಿವಾದಕ್ಕೆ ಕಾರಣವಾಗಿದೆ. ಇದು ಸೋಷಿಯಲ್ ಮಿಡಿಯಾದಲ್ಲೂ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ಹಿಂದೂ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಶೋನಲ್ಲಿ ಸ್ಟೇಜ್ ಮೇಲೆ ರಕ್ಷಕ್ ಬುಲೆಟ್ ಅವರು ಸಹನಟಿಗೆ ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕೊಂಡು ಸ್ವಿಜರ್‌ಲ್ಯಾಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾರೆ ಅನ್ನಿಸ್ತಿದೆ ಎಂದು ಡೈಲಾಗ್ ಹೊಡೆದಿದ್ದಾರೆ. ಸಹನಟಿಗೆ ಡೈಲಾಗ್ ಮೂಲಕ ಹೊಗಳುವ ಭರದಲ್ಲಿ ರಕ್ಷಕ್ ಯಡವಟ್ಟು ಮಾಡಿಕೊಂಡಿದ್ದಾರೆ. ಇದು ಹಿಂದೂ ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ.
ಸದ್ಯ ಇದೇ ಕಾರಣಕ್ಕೆ ಕೆರಳಿರೋ ಹಿಂದೂ ಮುಖಂಡರು ರಕ್ಷಕ್ ಬುಲೆಟ್ ವಿರುದ್ಧ ಇಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ. ಜೊತೆಗೆ ಕೂಡಲೇ ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ತೆರಳಿ ತಪ್ಪು ಕಾಣಿಕೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ರಕ್ಷಕ್ ವಿರುದ್ಧ ಮಾತ್ರ ಅಲ್ಲದೇ ಶೋನ ನಿರ್ದೇಕರು ಮತ್ತು ಜಡ್ಜ್ ವಿರುದ್ಧ ಹಿಂದೂ ಮುಖಂಡರು ಕಿಡಿಕಾರಿದ್ದಾರೆ. ಶೋ ಪ್ರದರ್ಶನಕ್ಕೂ ಮುನ್ನ ಆಗಿರುವ ತಪ್ಪಿನ ಬಗ್ಗೆ ಗಮನ ಇಲ್ಲದೆ ತೋರಿಸಿರೋದು, ಕೋಟ್ಯಾಂತರ ಹಿಂದೂಗಳು ಭಾವನೆಗೆ ಧಕ್ಕೆಯಾಗಿದೆ. ಸರ್ಕಾರವೇ ನಾಡ ದೇವಿಗೆ ನಮಿಸಿ ಗೌರವ ಸಲ್ಲಿಸುವಾಗ, ಎಲ್ಲಾರ ಭಾವನೆಗೆ ಧಕ್ಕೆಯಾಗುವ ವಿಚಾರದ ಬಗ್ಗೆ ಗಮನ ಹರಿಸದೇ ಇರೋದು ಸಂಬಂಧಿಸಿದ ಎಲ್ಲರ ತಪ್ಪು. ಹಾಗಾಗಿ ದೂರಿನಲ್ಲಿ ಇವರ ಹೆಸರುಗಳನ್ನು ಉಲ್ಲೇಖಿಸಿ ದೂರು ನೀಡಲು ಮುಂದಾಗಿದ್ದಾರೆ. ಒಟ್ಟಾರೆ ಗೊತ್ತೋ ಗೊತ್ತಿಲ್ಲದೆಯೋ ಮಾಡೋ ಯಡವಟ್ಟು ವಿವಾದವಾಗಿ ಸುತ್ತಿಕೊಳ್ಳುತ್ತಿದೆ. ಈ ಬಗ್ಗೆ ರಕ್ಷಕ್ ಕ್ಷಮೆ ಕೇಳಿ ಇತ್ಯರ್ಥ ಮಾಡ್ತಾರೋ ಅಥವಾ ಮತ್ತಷ್ಟು ವಿವಾದಕ್ಕೆ ಕಾರಣವಾಗ್ತಾರೋ ಎಂದು ಕಾದುನೋಡಬೇಕಿದೆ.