ಹುಬ್ಬಳ್ಳಿ: ಬೆಂಗಳೂರಿಗೆ ಸೀಮಿತವಾಗಿದ್ದ ಈದ್ಗಾ ಮೈದಾನ ವಿವಾದ ಈಗ ನಿಧಾನವಾಗಿ ರಾಜ್ಯವ್ಯಾಪಿ ಹಬ್ಬುತ್ತಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನ ಮತ್ತೆ ಮುನ್ನೆಲೆಗೆ ಬಂದಿದೆ. ಇದರಿಂದ ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದ ಮತ್ತೆ ಪುಟಿದೇಳುವ ಲಕ್ಷಣಗಳು ಗೋಚರವಾಗುತ್ತಿವೆ.
ವಿವಾದದ ಕೇಂದ್ರ ಬಿಂದುವಾಗಿರುವ ಈ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ಗಣೇಶ ಪ್ರತಿಷ್ಠಾಪನೆ ಮಾಡಲು ಚಿಂತನೆ ನಡೆದಿದೆ. ರಾಣಿ ಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಈ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದೆ.
Advertisement
Advertisement
ಈದ್ಗಾ ಮೈದಾನದಲ್ಲಿ ವರ್ಷದಲ್ಲಿ ಎರಡು ಬಾರಿ ನಮಾಜ್ ಮತ್ತು ಎರಡು ಬಾರಿ ರಾಷ್ಟ್ರ ಧ್ವಜ ಹಾರಿಸಲು ಅವಕಾಶವಿದೆ. ಉಳಿದ ದಿನಗಳಲ್ಲಿ ಕಾರ್ ಪಾರ್ಕಿಂಗ್‌ಗೆ ಸ್ಥಳವಾಗಿ ಮಾರ್ಪಡಿಸಲಾಗಿದೆ. ಆದರೆ ಈಗ ಏಕಾಏಕಿ ಇದೇ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಒತ್ತಾಯ ಕೇಳಿಬಂದಿದೆ. ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಚರ್ಚಿಸಲು ಆ.15ರಂದು ಸಭೆಯನ್ನು ಕರೆಯಲಾಗಿದೆ.
Advertisement
ಸ್ವಾತಂತ್ರ್ಯ ಪೂರ್ವದಲ್ಲಿ ಮನೆ ಮನೆಯಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಣೇಶ ವಿಗ್ರಹವನ್ನು ಸಾರ್ವಜನಿಕವಾಗಿ ಬಾಲಗಂಗಾಧರ ತಿಲಕರು ಆಚರಿಸಲು ಶುರುಮಾಡಿದ್ದರು. ಈಗ ಸ್ವಾತಂತ್ರ್ಯ ಉತ್ಸವದ ಅಮೃತ ಮಹೋತ್ಸವದಲ್ಲಿರುವ ಕಾರಣ ಈ ವರ್ಷದಿಂದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಮುಂದಾಗಿದ್ದೇವೆ. ಹೀಗಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಹಿಂದೂ ಸಂಘಟನೆಗಳು ಪಾಲಿಕೆಯಲ್ಲಿ ಮನವಿ ಮಾಡಿವೆ.