ಉಡುಪಿ: ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶ್ರೀಕೃಷ್ಣಮಠದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಇಂದು ಭೇಟಿ ಮಾಡಿದರು.
Advertisement
ಇದೇ ವೇಳೆ ಮಾತನಾಡಿದ ಮುತಾಲಿಕ್, ಇಫ್ತಾರ್ ಕೂಟದಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ. ಈ ಬಗ್ಗೆ ಪೇಜಾವರ ಸ್ವಾಮೀಜಿ ಜೊತೆ ಚರ್ಚಿಸಲು ಉಡುಪಿಗೆ ಬಂದಿದ್ದೇನೆ. ಗೋ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಆದ್ರೆ ಗೋ ಭಕ್ಷಕರಿಗೆ ಮಠದ ಆವರಣದಲ್ಲಿ ನಮಾಜ್ ಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಹೇಳಿದರು.
Advertisement
Advertisement
ಪೇಜಾವರ ಸ್ವಾಮೀಜಿಯವರು ಈ ಬಗ್ಗೆ ಸಮರ್ಥನೆ ಮಾಡುತ್ತಿದ್ದಾರೆ. ಸ್ವಾಮೀಜಿ ಸಮರ್ಥನೆಯಿಂದ ನಮಗೆ ತೃಪ್ತಿಯಾಗಿಲ್ಲ. ಈ ಬಗ್ಗೆ ಮುಂದೇನು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ. ಸಂಘಟನೆಯ ಒಳಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿ ಮಠದಿಂದ ಮುತಾಲಿಕ್ ತೆರಳಿದರು.
Advertisement
ಇದೇ ವಿಚಾರವಾಗಿ ಪೇಜಾವರಶ್ರೀ ಪ್ರತಿಕ್ರಿಯೆ ನೀಡಿದ್ದು, ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಇದು ನನ್ನ ತತ್ವ. 1955ರಿಂದ ಸ್ನೇಹ ಸೌಹಾರ್ಧಕ್ಕೆ ಪ್ರಯತ್ನಿಸುತ್ತಾ ಬಂದಿದ್ದೇನೆ. ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ. ಇಫ್ತಾರ್ ಕೂಟದಿಂದ ಹಿಂದೂಗಳು ಉದಾರಿಗಳು ಎಂಬ ಸಂದೇಶ ಹೋಗುತ್ತೆ. ಕೃಷ್ಣಮಠದ ಒಳಗೆ ನಮಾಜು ಮಾಡಿಲ್ಲ. ಸಾರ್ವಜನಿಕ ಭೋಜನ ಶಾಲೆಯಲ್ಲಿ ನಮಾಜು ನಡೆದಿದೆ. ಮಧ್ವಾಚಾರ್ಯರ ಕಾಲದಿಂದ ಮುಸ್ಲಿಮರ ಜೊತೆ ಉತ್ತಮ ಭಾಂದವ್ಯವಿದೆ. ಉಡುಪಿ ಚಲೋ ಸಂದರ್ಭದಲ್ಲಿ ಮುಸ್ಲಿಮರು ಮಠಕ್ಕೆ ಸಹಕಾರ ನೀಡಿದ್ದಾರೆ ಅಂದ್ರು.
ಜನರ ಮನಸ್ಸು ಕದಡಿಸುವ ಕೆಲಸ ಯಾರೂ ಮಾಡಬೇಡಿ. ನನ್ನದು ಸ್ವತಂತ್ರ ವ್ಯಕ್ತಿತ್ವ. ಹಿಂದೂ ಧರ್ಮ ಏನು ಎಂಬುದು ಚೆನ್ನಾಗಿ ನನಗೆ ಗೊತ್ತು. ಇದೊಂದು ಸಹಜ ಕಾರ್ಯಕ್ರಮ. ಇದನ್ನು ದೊಡ್ಡ ವಿಷಯ ಮಾಡಬೇಡಿ ಅಂತ ಹೇಳಿದ್ರು.