ಹಾಸನ: ಜಿಲ್ಲೆಯ ಹೆಸರಾಂತ ಹಿಮ್ಸ್(ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ) ಕಾಲೇಜಿಗೆ ಬೀಗ ಬೀಳುತ್ತೆ, ಹಿಂಬಡ್ತಿ ನೀಡುತ್ತಾರೆ ಎಂಬ ಸುದ್ದಿ ಕೇಳಿ ಸ್ವತಃ ಹಿಮ್ಸ್ ನಿರ್ದೇಶಕ ರವಿಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದ್ದು, ಆ ರೀತಿಯ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ನಮ್ಮ ಕಾಲೇಜಿಗೆ ಒಳ್ಳೆಯ ಹೆಸರು ಇದೆ. ಎಂಸಿಐ ತಂಡದವರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಕಾಲೇಜು ಆರಂಭ ಆದಾಗ ಪ್ರವೇಶಾತಿ ಸಂಖ್ಯೆ 100 ಇತ್ತು. ತದ ನಂತರ ಪ್ರವೇಶಾತಿ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ನಾರ್ಮ್ಸ್ ಪ್ರಕಾರ ಸಿಬ್ಬಂದಿ ಹೆಚ್ಚು ಮಾಡಬೇಕಿದೆ ಎಂದರು.
ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ನಮಗೆ ಇನ್ನೂ ಕಾಲಾವಕಾಶ ಇದೆ. ಯಾರೂ ಕೂಡ ಆತಂಕ ಪಡುವ ಸ್ಥಿತಿ ಇಲ್ಲ. ಯಾವುದೇ ಕಾರಣಕ್ಕೂ ಹಿಮ್ಸ್ ವೈದ್ಯಕೀಯ ಕಾಲೇಜಿಗೆ ಬೀಗ ಬೀಳುವುದಿಲ್ಲ ಎಂದು ತಿಳಿಸಿದರು.