ಭಾರತದ ಕಿರಿಟ ಹಿಮಾಲಯ ಎಂದ ತಕ್ಷಣ ಬೆಳ್ಳಿಯ ಬೆಟ್ಟಗಳು… ಪರ್ವತರೋಹಿಗಳ ಸ್ವರ್ಗ… ಒಮ್ಮೆ ಆದ್ರೂ ಹೋಗ್ಬೇಕು ಅಲ್ಲಿಗೆ.. ಇನ್ನೂ ಏನೇನೋ ಕನಸು.. ಆದ್ರೆ ಹಿಮಾಲಯದ ನಂದಾದೇವಿಯ 25,643 ಅಡಿ ಎತ್ತರದ ಕಡಿದಾದ ಶಿಖರದ ಅಡಿಯಲ್ಲಿ ಕಳೆದು ಹೋದ ವಸ್ತುವೊಂದು ಉತ್ತರ ಭಾರತಕ್ಕೆ ಕ್ಷಣಕ್ಷಣಕ್ಕೂ ಅಪಾಯದ ಗಂಟೆಯನ್ನು ಬಾರಿಸುತ್ತಲೇ ಇದೆ.
ಈ ಭಯ 1965 ರಿಂದಲೂ ಭಾರತಕ್ಕೆ ಕಾಡುತ್ತಲೇ ಇದೆ. ಇಷ್ಟಕ್ಕೂ ಮಂಜಿನಡಿ ಅಡಗಿರುವ ವಸ್ತು ಯಾವುದು ಗೊತ್ತಾ? ಪ್ಲುಟೋನಿಯಂ ಚಾಲಿತ ವಿಕಿರಣಶೀಲ ಪತ್ತೇದಾರಿ ಸಾಧನ. ಇದು ಸ್ಫೋಟಿಸದೇ ಇದ್ದರೂ, ಹಿಮಾಲಯದ ಜೊತೆಗೆ ಉತ್ತರಭಾರತದ ಜಲಮೂಲಗಳನ್ನೇ ಹಾಳು ಮಾಡುವ ಸಾಮರ್ಥ್ಯ ಇದಕ್ಕಿದೆ. ಏನಿದು ಪತ್ತೇದಾರಿ ಸಾಧನ? ಏನಿದು ಪ್ಲುಟೋನಿಯಂ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಚೀನಾ ಅಣುಪರೀಕ್ಷೆ
1964ರಲ್ಲಿ ಚೀನಾ ಯಶಸ್ವಿ ಅಣುಪರೀಕ್ಷೆ ನಡೆಸಿದ ಸುದ್ದಿ ಅಮೆರಿಕದಲ್ಲಿ ಆತಂಕವನ್ನೇ ಸೃಷ್ಟಿಸಿತ್ತು. ಚೀನಾದ ಕ್ಷಿಪಣಿಗಳು ಎಷ್ಟು ಆಧುನಿಕವಾಗಿವೆ? ಅವುಗಳ ವ್ಯಾಪ್ತಿ ಎಷ್ಟು? ಎಂಬ ಮಾಹಿತಿ ಅಮೆರಿಕಕ್ಕೆ ಬೇಕಿತ್ತು. ಆ ಸಮಯದಲ್ಲಿ ಉಪಗ್ರಹ ತಂತ್ರಜ್ಞಾನ ಮುಂದುವರಿದಿರಲಿಲ್ಲ, ಹೀಗಾಗಿ ಆ ಮಾಹಿತಿಗಾಗಿ ಉಪಗ್ರಹಗಳನ್ನು ಅವಲಂಬಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ಚೀನಾ ಗಡಿಯ ಹೊರಗಿನಿಂದಲೇ ಚೀನಾದ ರೇಡಿಯೊ ಸಂದೇಶಗಳನ್ನು ಕದ್ದಾಲಿಸಲು ಪ್ರಯತ್ನಿಸಿತ್ತು. ಆಗ ಆಯ್ಕೆ ಮಾಡಿಕೊಂಡಿದ್ದೇ ನಂದಾದೇವಿ ಶಿಖರವನ್ನು.
ನಂದಾದೇವಿ ಶಿಖರದಲ್ಲಿ ಕದ್ದಾಲಿಕೆ ಕೇಂದ್ರ
ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಭಾರತದ ಗುಪ್ತಚರ ಸಂಸ್ಥೆ ಐಬಿ(ಇಂಟೆಲಿಜೆನ್ಸ್ ಬ್ಯೂರೊ) ಜೊತೆ ಸೇರಿ ಈ ಯೋಜನೆ ರೂಪಿಸಿತು. ಅದರಂತೆ ಸ್ವಯಂಚಾಲಿತ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಕೇಂದ್ರವನ್ನು ಹಿಮಾಲಯದಲ್ಲಿರುವ, ನಂದಾದೇವಿ ಶಿಖರದ ತುದಿಯಲ್ಲಿ ಸ್ಥಾಪಿಸಲು ಎರಡೂ ದೇಶಗಳು ಮುಂದಾದವು. ಈ ಕೇಂದ್ರದಿಂದ ಮಾಹಿತಿಯನ್ನು ರವಾನಿಸಲು ಅಪಾರ ಪ್ರಮಾಣದ ವಿದ್ಯುತ್ ಅವಶ್ಯಕತೆಯಿತ್ತು. ಬ್ಯಾಟರಿಗಳು ಅಲ್ಲಿನ ಸಬ್ ಜೀರೊ ತಾಪಮಾನದಲ್ಲಿ ಒಂದು ವಾರ ಸಹ ಇರುತ್ತಿರಲಿಲ್ಲ. ಹೀಗಾಗಿ ವಿಶೇಷ ಉಪಕರಣದ ಆವಿಷ್ಕಾರದಲ್ಲಿ ತೊಡಗಿಕೊಂಡಿತು.
ಸಾಧನದಲ್ಲಿದ್ದ ಇಂಧನ ಯಾವುದು?
ವಿದ್ಯುತ್ ಸಮಸ್ಯೆ ಪರಿಹರಿಸಲು ಜನರೇಟರ್‌ವೊಂದನ್ನು ಅಳವಡಿಸಲಾಯಿತು. ಅದಕ್ಕೆ ಇಂಧನವಾಗಿ 7 ಪ್ಲುಟೋನಿಯಂ 238 ಕ್ಯಾಪ್ಸೂಲ್‌ಗಳನ್ನು ಬಳಸಲಾಯಿತು. ಅದರ ಕೇಂದ್ರ ಭಾಗ ಹೀಟರ್‌ಅನ್ನು ಬಿಸಿ ಮಾಡುತ್ತಿತ್ತು. ಈ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸಲಾಯಿತು. ಹೀಗೆ ಸುದೀರ್ಘ ಕಾಲ ವಿದ್ಯುತ್ ಹರಿಯುವಂತೆ ವ್ಯವಸ್ಥೆ ರೂಪಿಸಲಾಯಿತು. ಇದರಿಂದ ಈ ಸಾಧನ ಯಾವುದೇ ಸಮಸ್ಯೆಯಿಲ್ಲದೆ 2- 5 ವರ್ಷಗಳ ತನಕ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿತ್ತು.
ಮಿಷನ್ ನಂದಾದೇವಿ
ಅಕ್ಟೋಬರ್ 1965ರಲ್ಲಿ, ಅಮೆರಿಕದ ಮತ್ತು ಭಾರತೀಯ ಪರ್ವತಾರೋಹಿಗಳ ತಂಡ ನಂದಾದೇವಿ ಶೀಖರಕ್ಕೆ ಆರೋಹಣವನ್ನು ಪ್ರಾರಂಭಿಸಿತು. ಆ ತಂಡದಲ್ಲಿದ್ದವರು ವಿಶ್ವದರ್ಜೆಯ ಪರ್ವತಾರೋಹಿಗಳಾಗಿದ್ದರು. ಆದರೆ ಈ ಕಾರ್ಯಾಚರಣೆ ವೇಳೆ ಹಿಮಪಾತವು ಅಪ್ಪಳಿಸಿತು. 24,000 ಅಡಿ ಎತ್ತರದಲ್ಲಿಆಮ್ಲಜನಕದ ಕೊರತೆ ಎದುರಾಯಿತು.
ಆಗ ಈ ತಂಡದ ಮುಂದೆ ಎರಡೇ ದಾರಿ ಉಳಿದಿತ್ತು. ಆ ಪತ್ತೆದಾರಿ ಸಾಧನದೊಂದಿಗೆ ಸಾಯುವುದು ಇಲ್ಲವೇ ಅಲ್ಲಿಂದ ಪಾರಾಗುವುದು. ಇದರಿಂದಾಗಿ ಆ ಸಾಧನವನ್ನು ಒಂದು ಬಂಡೆಗೆ ಕಟ್ಟಿ, ಹವಾಮಾನ ಸರಿಯಾದ ನಂತರ ಹಿಂತಿರುಗುವ ಉದ್ದೇಶದಿಂದ ಕೆಳಗಿನ ಶಿಬಿರಕ್ಕೆ ಮರಳಿದರು.
1966ರಲ್ಲಿ ಪರ್ವತಾರೋಹಿಗಳ ತಂಡವು ಮತ್ತೆ ಅಲ್ಲಿಗೆ ಬಂದಾಗ ಸಾಧನವನ್ನು ಬಿಟ್ಟು ಬಂದಿದ್ದ ಜಾಗವೇ ಮಾಯವಾಗಿತ್ತು. ಭಾರಿ ಹಿಮಪಾತ ಆ ಪ್ರದೇಶವನ್ನೇ ನಾಶಪಡಿಸಿತ್ತು. ಪ್ಲುಟೋನಿಯಂ ಜನರೇಟರ್, ಆಂಟೆನಾಗಳು ಮತ್ತು ಸಂವೇದಕಗಳು ಹಿಮದೊಂದಿಗೆ ಕೊಚ್ಚಿ ಹೋಗಿದ್ದವು. ಹಲವು ದಿನಗಳ ಕಾಲ ಸುಧಾರಿತ ಉಪಕರಣಗಳನ್ನು ಬಳಸಿ ಹುಡುಕಾಡಿದರೂ ಯಾವುದೇ ಉಪಯೋಗ ಆಗಲಿಲ್ಲ.
ಪ್ಲುಟೋನಿಯಂ ಕ್ಯಾಪ್ಸೂಲ್‌ಗಳ ಅರ್ಧ ಆಯಸ್ಸು 87 ವರ್ಷಗಳು. ಒಂದು ವೇಳೆ ಅದರ ಕವಚಕ್ಕೆ ಹಾನಿಯಾದರೆ, ವಿಕಿರಣಶೀಲ ವಸ್ತುವು ರಿಷಿಗಂಗಾ ನದಿಗೆ ಸೋರಿಕೆಯಾಗಬಹುದು, ಅದು ಮುಂದೆ ಗಂಗಾ ನದಿಯನ್ನು ಸೇರುತ್ತದೆ. ಲಕ್ಷಾಂತರ ಜನರು ಕುಡಿಯಲು ಮತ್ತು ಕೃಷಿಗಾಗಿ ಈ ನೀರನ್ನು ಬಳಸುತ್ತಾರೆ. ಸೋರಿಕೆಯು ಭಾರತದ ಅತ್ಯಂತ ಪವಿತ್ರ ಜಲಮೂಲಗಳ ಮೇಲೆ ವ್ಯಾಪಕವಾದ ವಿಕಿರಣ ವಿಷವನ್ನು ಹರಡಲಿದೆ. ಈ ಉಪಕರಣದಿಂದ ಪರಿಸರಕ್ಕೆ ಯಾವಾಗ ಹಾನಿ ಸಂಭವಿಸುವುದೋ ಎನ್ನುವುದು ಯಾರಿಗೂ ತಿಳಿದಿಲ್ಲ.
ಮತ್ತೆ ಕದ್ದಾಲಿಕೆಗೆ ಯತ್ನಿಸಿದ್ದ ಅಮೆರಿಕ
ಪರಮಾಣು ಸಾಧನ ಕಾಣೆಯಾದ ಬಳಿಕವೂ ಅಮೆರಿಕ ತನ್ನ ಕದ್ದಾಲಿಕೆ ಯೋಜನೆಯನ್ನು ಅಲ್ಲಿಗೇ ನಿಲ್ಲಿಸಲಿಲ್ಲ. ಚೀನಾದಿಂದ ಮಾಹಿತಿ ಪಡೆಯಲು ಮತ್ತೆ 1967ರಲ್ಲಿಎರಡನೇ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅದಕ್ಕಾಗಿ ನಂದಾ ಕೋಟ್ ಶಿಖರವನ್ನು ಆರಿಸಲಾಯಿತು. ಅಲ್ಲಿ 2ನೇ ಪರಮಾಣು ಕದ್ದಾಲಿಕೆ ಕೇಂದ್ರವನ್ನು ಯಶಸ್ವಿಯಾಗಿ ಸ್ಥಾಪಿಸಿದರು. ಇದು ಒಂದು ವರ್ಷದವರೆಗೆ ಕೆಲಸ ಮಾಡಿ, ಮಂಜಿನೊಳಗೆ ಸಿಲುಕಿ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಬಳಿಕ ಭಾರತೀಯ ಸೇನೆಯ ಪರ್ವತಾರೋಹಿ ಹರೀಶ್ ರಾವತ್ ನೇತೃತ್ವದ ತಂಡ ಅದನ್ನು ಪತ್ತೆ ಮಾಡಿ ತಂದಿತ್ತು.
ನಂದಾದೇವಿಗೆ ನಿಷೇಧ!
1970ರ ದಶಕದ ವೇಳೆಗೆ ಉಪಗ್ರಹ ತಂತ್ರಜ್ಞಾನ ಸುಧಾರಣೆಯಿಂದ ಪರ್ವತಗಳ ಮೇಲಿನ ಕದ್ದಾಲಿಕೆ ಕೇಂದ್ರಗಳ ಅವಶ್ಯಕತೆ ಬರಲಿಲ್ಲ. ಆದರೆ ನಂದಾದೇವಿ ಪರ್ವತದಲ್ಲಿ ಕಾಣೆಯಾದ ಪರಮಾಣು ಸಾಧನದ ರಹಸ್ಯ 1978ರಲ್ಲಿ ಮಾಧ್ಯಮಗಳಿಗೆ ಸೋರಿಕೆಯಾಗುವ ತನಕವೂ ಹೊರಜಗತ್ತಿಗೆ ತಿಳಿದಿರಲಿಲ್ಲ. ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸಂಸತ್ತಿನಲ್ಲಿ ಈ ಘಟನೆಯನ್ನು ಒಪ್ಪಿಕೊಳ್ಳಬೇಕಾಯಿತು. ಇದು ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಬಳಿಕ ನಂದಾದೇವಿ ಪ್ರಾಂತ್ಯದಲ್ಲಿ ಪರ್ವತಾರೋಹಣವನ್ನು ನಿಷೇಧ ಹೇರಿ ತೀರ್ಮಾನ ಕೈಗೊಳ್ಳಲಾಯಿತು.





