ಗ್ಯಾರಂಟಿ ಹೊಡೆತಕ್ಕೆ ತತ್ತರ – ದೇವಸ್ಥಾನದ ಹಣಕ್ಕೆ ಕೈ ಹಾಕಿತಾ ಹಿಮಾಚಲ ಸರ್ಕಾರ?

Public TV
3 Min Read
Sukhvinder Singh Sukhu Himachal Pradesh Assembly

– ಜನ ಕಲ್ಯಾಣ ಯೋಜನೆಗಾಗಿ ದೇವಸ್ಥಾನ ಹಣ ಕೇಳಿದ ಸರ್ಕಾರ
– ಸರ್ಕಾರದ ಯೋಜನೆಗಳಿಗೆ ದೇವಸ್ಥಾನದ ಹಣ ಬಳಕೆ ತಪ್ಪು: ಬಿಜೆಪಿ

ಶಿಮ್ಲಾ: ಗ್ಯಾರಂಟಿ ಯೋಜನೆ (Congress Guarantee) ಜಾರಿ ಮಾಡಿ ಈಗಾಗಲೇ ಆರ್ಥಿಕ ಮುಗ್ಗಟ್ಟು (Economic Crisis) ಎದುರಿಸುತ್ತಿರುವ ಹಿಮಾಚಲ ಸರ್ಕಾರ ಈಗ ತನ್ನ ಯೋಜನೆಗಳಿಗೆ ಹಣ ಹೊಂದಿಸಲು ದೇವಸ್ಥಾನದ (Temple) ಹಣಕ್ಕೆ ಕೈ ಹಾಕಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಜನವರಿ 29 ರಂದು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಧಿಸೂಚನೆ ಹೊರಡಿಸಿ, ರಾಜ್ಯವು ನಡೆಸುವ ದತ್ತಿ ಚಟುವಟಿಕೆಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಕೊಡುಗೆಗಳನ್ನು ಕೊಡಬಹುದು ಎಂದು ಹೇಳಿದೆ.

ಹಿಮಾಚಲ ಪ್ರದೇಶ (Himachal Pradesh Govt) ಹಿಂದೂ ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ದತ್ತಿ ದತ್ತಿ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದೇವಾಲಯ ಟ್ರಸ್ಟ್‌ಗಳು ದೇಣಿಗೆಗಳನ್ನು ನೀಡುತ್ತಲೇ ಇರುತ್ತವೆ. ಮೇಲೆ ತಿಳಿಸಿದ ಕಲ್ಯಾಣ ಯೋಜನೆಗಳಿಗೆ ಹಣವನ್ನು ಒದಗಿಸುವ ಉದ್ದೇಶದಿಂದ ಮುಖ್ಯ ಮಂತ್ರಿ ಸುಖ ಆಶ್ರಯ ಮತ್ತು ಮುಖ್ಯ ಮಂತ್ರಿ ಸುಖ ಶಿಕ್ಷಾ ಯೋಜನೆಗೆ ದೇಣಿಗೆಗಳನ್ನು ನೀಡಬಹುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿ ಸುಖ ಆಶ್ರಯ ಯೋಜನೆ ಫೆಬ್ರವರಿ 2023 ರಲ್ಲಿ ಆರಂಭಗೊಂಡರೆ, ಮುಖ್ಯಮಂತ್ರಿ ಸುಖ ಶಿಕ್ಷಾ ಯೋಜನೆ ಸೆಪ್ಟೆಂಬರ್‌ 2024 ರಲ್ಲಿ ಆರಂಭಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ: ಶ್ರೀರಾಮುಲು ಬೇಸರ

ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಪ್ರತಿಕ್ರಿಯಿಸಿ, ಹಿಂದಿನ ಯಾವುದೇ ಸರ್ಕಾರವು ಬಜೆಟ್ ಯೋಜನೆಗಳಿಗೆ ದೇವಾಲಯದ ಟ್ರಸ್ಟ್ ನಿಧಿಯನ್ನು ಬಳಸಿಲ್ಲ. ಸರ್ಕಾರಿ ವೆಚ್ಚಗಳಿಗೆ ದೇವಾಲಯದ ನಿಧಿಯನ್ನು ಬಳಸುವುದು ಆಘತಕಾರಿ ಎಂದು ಹೇಳಿ ಆಕ್ರೋಶ ಹೊರ ಹಾಕಿದ್ದಾರೆ.

ಒಂದು ಕಡೆ ಕಾಂಗ್ರೆಸ್ ನಾಯಕರು ಸನಾತನ ಧರ್ಮ ಮತ್ತು ಸನಾತನ ಧರ್ಮವನ್ನು ಪಾಲನೆ ಮಾಡುವವರನ್ನು ಅವಮಾನಿಸುತ್ತಾರೆ. ಇನ್ನೊಂದು ಕಡೆ ತಮ್ಮ ಯೋಜನೆಗಾಗಿ ಹಣ ಪಡೆಯಲು ದೇವಸ್ಥಾನದ ಹಣವನ್ನು ಬಳಸಲು ಮುಂದಾಗುತ್ತಿದ್ದಾರೆ. ಇದೊಂದು ವಿಚಿತ್ರ ನಿರ್ಧಾರವಾಗಿದ್ದು ಎಲ್ಲಾ ದೇವಸ್ಥಾನದ ಸಮಿತಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲರೂ ಇದನ್ನು ವಿರೋಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಿಜೆಪಿಯಿಂದ ಟೀಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಪ್ರತಿಕ್ರಿಯಿಸಿ, ಈ ಕೊಡುಗೆ ಸ್ವಯಂಪ್ರೇರಿತವಾಗಿದೆ. ಇದು ಸುಖ ಆಶ್ರಯ ಯೋಜನೆಯಡಿ ಅನಾಥರಿಗೆ ಕಟ್ಟಡ ಸೌಲಭ್ಯಗಳಿಗಾಗಿ ಬಳಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಚುನಾವಣಾ ಸಮಯದಲ್ಲಿ ಪ್ರಕಟಿಸಿದ ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸಕ್ಕೆ ತೀವ್ರ ಹೊರೆಯಾಗುತ್ತಿದೆ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರ ಈಗ ವಿದ್ಯುತ್ ಸಬ್ಸಿಡಿ ನಿಲ್ಲಿಸಲು ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ ವಿದ್ಯುತ್‌ ಶುಲ್ಕ ಪಾವತಿಸಲು ಸಾಮರ್ಥ್ಯ ಇರುವ ವಿದ್ಯುತ್ ಗ್ರಾಹಕರು ಸಬ್ಸಿಡಿಯನ್ನು ಬಿಟ್ಟುಕೊಡುವಂತೆ ಸುಖ್ವಿಂದರ್ ಸುಖು ಈ ಹಿಂದೆ ಮನವಿ ಮಾಡಿದ್ದರು. ಅಷ್ಟೇ ಅಲ್ಲದೇ ತಾವೂ ಸಹ ಸಬ್ಸಿಡಿ ಬಿಟ್ಟುಕೊಡುತ್ತಿರುವುದಾಗಿ ತಿಳಿಸಿದ್ದರು.

 

Share This Article