ವಾರ್ಸೋ: ಭಾರತದ ಚಾಂಪಿಯನ್ ಓಟಗಾರ್ತಿ ಹಿಮಾ ದಾಸ್ ಕಳೆದ ಒಂದು ವಾರದಲ್ಲಿ ಎರಡು ಅಂತಾರಾಷ್ಟ್ರೀಯ ಸ್ವರ್ಣ ಪದಕವನ್ನು ಗೆದ್ದುಕೊಂಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ 19 ವರ್ಷದ ಯುವ ಪ್ರತಿಭೆ ಹಿಮಾ ದಾಸ್, ಭಾನುವಾರ ಪೋಲೆಂಡಿನಲ್ಲಿ ನಡೆದ ಕುಂತೊ ಅಥ್ಲೆಟಿಕ್ಸ್ ಕೂಟದಲ್ಲಿನ ಮಹಿಳೆಯರ 200 ಮೀ. ಓಟದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಬಂಗಾರದ ಪದಕವನ್ನು ಗೆದ್ದುಕೊಂಡಿದ್ದಾರೆ.
Advertisement
Advertisement
ಈ ಕ್ರೀಡಾಕೂಟದಲ್ಲಿ ಹಿಮಾ ದಾಸ್ ಅವರು 23.97 ಸೆಕೆಂಡ್‍ಗಳಲ್ಲಿ ತನ್ನ ಗುರಿಮುಟ್ಟಿ ಚಿನ್ನ ಗೆದ್ದರೆ, ಭಾರತದ ಮತ್ತೊಬ್ಬ ಓಟಗಾರ್ತಿ ವಿಕೆ ವಿಸ್ಮಯಾ 24.06 ಸೆಕೆಂಡ್‍ನಲ್ಲಿ ಓಡಿ ಬೆಳ್ಳಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಳೆದ ಮಂಗಳವಾರ ಪೋಲೆಂಡ್‍ನಲ್ಲೇ ನಡೆದ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಹಿಮಾ ದಾಸ್ 23.65 ಸೆಕೆಂಡ್‍ಗಳಲ್ಲಿ ರೇಸ್ ಪೂರೈಸಿ ಚಿನ್ನದ ಪದಕ ಗೆದ್ದಿದ್ದರು.
Advertisement
Advertisement
ಹಿಮಾ ದಾಸ್ ಪ್ರಸಕ್ತ ಸಾಲಿನಲ್ಲಿ ಗಳಿಸಿದ ಎರಡನೇ ಚಿನ್ನದ ಪದಕ ಇದಾಗಿದೆ. ಕಳೆದ ವರ್ಷ 200 ಮೀ. ಓಟದಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ 23.10 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿದ್ದರು. ಇದೇ ರೇಸ್‍ನಲ್ಲಿ ಭಾರತದ ವಿಸ್ಮಯಾ 23.75 ಸೆಕೆಂಡ್‍ನಲ್ಲಿ ಓಡಿ ಮೂರನೇ ಸ್ಥಾನದೊಂದಿಗೆ ಕಂಚು ಗೆದ್ದಿದ್ದರು.
ಇದೇ ವೇಳೆ ರಾಷ್ಟ್ರೀಯ ದಾಖಲೆಯ ವೀರ ಮುಹಮ್ಮದ್ ಅನಾಸ್ ಇದೇ ಕುಂತೊ ಅಥ್ಲೆಟಿಕ್ಸ್ ಕ್ರೀಡಾಕೂಟದ ಪುರುಷರ 200 ಮೀ. ಓಟದಲ್ಲಿ 21.18 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದಿದ್ದಾರೆ. ಎಂ.ಜಿ ಬಬೀರ್ 400 ಮೀ. ಹರ್ಡಲ್ಸ್ ನಲ್ಲಿ 50.21 ಸೆಕೆಂಡ್‍ಗಳ ಸಾಧನೆಯೊಂದಿಗೆ ಬಂಗಾರದ ಸಾಧನೆ ಮಾಡಿದ್ದಾರೆ. ಇದೇ ರೇಸ್‍ನಲ್ಲಿ ಜಿತಿನ್ ಪಾಲ್ 3ನೇ (52.26 ಸೆ.) ಸ್ಥಾನ ಪಡೆದಿದ್ದಾರೆ.