ಬೆಂಗಳೂರು: ಹಿಜಬ್ ವಿವಾದದ ಕುರಿತು ಹೈಕೋರ್ಟ್ ನೀಡಿದ ತೀರ್ಪಿನ ವಿಷಯ ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಕಾರಣವಾಯಿತು. ಬಜೆಟ್ ಚರ್ಚೆ ವೇಳೆ ಕಾಂಗ್ರೆಸ್‍ನ ಸದಸ್ಯ ಸಲೀಂ ಅಹಮದ್, ತೀರ್ಪು ಯಾಕೆ ಈ ರೀತಿ ಬಂದಿತು ಎನ್ನುವ ಕುರಿತು ಚರ್ಚೆ ನಡೆಯಬೇಕು ಎಂದರು. ಈ ವಿಚಾರಕ್ಕೆ ಸದನದಲ್ಲಿ ಗಲಾಟೆ ಪ್ರಾರಂಭ ಆಯಿತು.
ಸಲೀಂ ಅಹಮದ್ ಮಾತನಾಡಿ, ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಏಕೆ ಬಂತು. ಹಿಜಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಯಾಕೆ ಹೀಗೆ ಬಂತು. ಸರ್ಕಾರದ ಆದೇಶವನ್ನೇ ಕೋರ್ಟ್ ಎತ್ತಿ ಹಿಡಿಯಿತು. ಹಿಜಬ್, ಬುರ್ಕಾ ನೂರಾರು ವರ್ಷದಿಂದ ಇದೆ. ಇದು ನಮ್ಮ ಧರ್ಮದ ಪದ್ಧತಿ. ಆದ್ರೆ ವಿವಾದ ಈಗ ಯಾಕಾಯಿತು ಎಂದು ಪ್ರಸ್ತಾಪಿಸಿದರು.
Advertisement
Advertisement
ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹೈಕೋರ್ಟ್ ತೀರ್ಪನ್ನು ಒಪ್ಪುತ್ತೀರಾ ಅಥವಾ ವಿರೋಧಿಸುತ್ತೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಹರಿ ಪ್ರಸಾದ್, ನಮ್ಮ ನಿಲುವನ್ನು ಸುಪ್ರೀಂ ಕೋರ್ಟ್‍ಗೆ ಹೇಳುತ್ತೇವೆ. ನಾವು ಇಲ್ಲಿ ಅದನ್ನು ಹೇಳಬೇಕಿಲ್ಲ, ನಮ್ಮ ಸದಸ್ಯರು ಮಾತನಾಡುವುದನ್ನು ಕೇಳಿಸಿಕೊಳ್ಳಲು ಹೇಳಿ ಎಂದು ಆಗ್ರಹಿಸಿದರು.
Advertisement
ಮತ್ತೆ ಮಾತು ಮುಂದುವರೆಸಿದ ಹರಿಪ್ರಸಾದ್, ಭಾಷಣದ ನಡುವೆ ನಮ್ಮ ಸದಸ್ಯರು ಸಮ್ಮತಿಸಲಿಲ್ಲ ಎಂದರೆ ಪ್ರತಿಪಕ್ಷ ನಾಯಕರಾಗಲಿ, ಸಭಾನಾಯಕರಿಗಾಗಲಿ ಮಧ್ಯದಲ್ಲಿ ಮಾತನಾಡಲು ಅವಕಾಶವಿಲ್ಲ. ಅವರಿಗೇನು ಕೊಂಬಿಲ್ಲ. ರೂಲ್ ಬುಕ್‍ನಲ್ಲಿಯೂ ಅವಕಾಶವಿಲ್ಲ ಎಂದರು.
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಇದು ಕೊಂಬಿನ ವಿಷಯ ಅಲ್ಲ. ಯಾರಿಗೇನು ಕೊಂಬು ಇಲ್ಲ. ಸರ್ಕಾರದ ವಿರುದ್ಧ ಆರೋಪ ಬಂದಾಗ ನಾವು ಕೆಲವೊಂದು ಸ್ಪಷ್ಟೀಕರಣ ನೀಡಬೇಕು ಆಗ ಮಾತನಾಡಬೇಕಾಗಲಿದೆ. ಅದಕ್ಕೆ ಎದ್ದು ನಿಂತಾಗ ಸಭಾಪತಿಗಳ ಸಮ್ಮತಿ ಮೇರೆಗೆ ಪ್ರತಿಪಕ್ಷ ನಾಯಕ, ಸಭಾ ನಾಯಕರಿಗೆ ಮಾತನಾಡಲು ಅವಕಾಶ ಕೊಡುವ ಸಂಪ್ರದಾಯ ಇದೆ ಎಂದು ಪ್ರತಿಪಾದಿಸಿದರು.
ಭಾಷಣ ಮುಂದುವರೆಸಿದ ಸಲೀಂ ಅಹಮದ್, ಕೋರ್ಟ್ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಬೇಕು. ನಾವು ಒಪ್ಪುತ್ತೇವೆ. ಆದರೆ ಈ ಘಟನೆ ಯಾಕಾಯಿತು? ಕೇಸರಿ ಶಾಲು ಪದ್ಧತಿ ಮೊದಲು ಇತ್ತಾ? ಅಣ್ಣ, ತಮ್ಮಂದಿರ ರೀತಿ ಇದ್ದ ವಿದ್ಯಾರ್ಥಿಗಳು ಈಗ ಮುಖ ಕೊಟ್ಟು ಮಾತನಾಡದ ಸ್ಥಿತಿ ಇದೆ. ಇದಕ್ಕೆ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
ಇದಕ್ಕೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ನೆಮ್ಮದಿಯಿಂದ ಇದ್ದ ಮಕ್ಕಳು ಇವರ ಚಿತಾವಣೆಯಿಂದ ಹಿಜಬ್ ಧರಿಸಿ ಹೋದರು ಎಂದು ಕಾಂಗ್ರೆಸ್ ವಿರುದ್ಧ ನೇರ ಆರೋಪ ಮಾಡಿದರು. ಈ ವೇಳೆ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇದನ್ನೂ ಓದಿ: ಎಸ್‍ಎಫ್‍ಐ ಉಗ್ರರ ಸಂಘಟನೆಯಾಗಿದ್ದು ಬ್ಯಾನ್ ಮಾಡಿ: ಕಾಂಗ್ರೆಸ್ ಸಂಸದ ಆಕ್ರೋಶ
ಮತ್ತೆ ಮಾತನಾಡಿದ ಸಲೀಂ ಅಹಮದ್, ಇಂದು ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಕ್ಕಳಲ್ಲಿ ಬೇಧ ಭಾವ ತಂದಿದ್ದಾರೆ ಇದಕ್ಕೆ ಯಾರು ಕಾರಣ? ವಿದ್ಯಾರ್ಥಿಗಳಲ್ಲಿ ಕಂದಕ ತರುವ ಹಿಂದೂ, ಮುಸ್ಲಿಂ ಯಾವುದೇ ಸಂಘಟನೆ ಇರಲಿ ಬ್ಯಾನ್ ಮಾಡಲಿ ಎಂದಿದ್ದೇವೆ. ಈ ಸರ್ಕಾರಕ್ಕೆ ಧಮ್ ಇದೆಯಾ? ಅಂತ ಪ್ರಶ್ನೆ ಮಾಡಿದ್ರು. ಶಿವಮೊಗ್ಗ ಹರ್ಷ ಕೊಲೆಗೆ 25 ಲಕ್ಷ ರೂ. ಕೊಟ್ಟರು. ಗದಗದಲ್ಲಿ ಮುಸ್ಲಿಂ ವ್ಯಕ್ತಿ ಕೊಲೆಗೆ ಪರಿಹಾರ ಕೊಟ್ಟಿಲ್ಲ. ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು. ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಆಗಿ ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಡೌನ್ಲೋಡಿಂಗ್ ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆಗೆ ಕನ್ನ