ಬೆಂಗಳೂರು: ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ಧರಿಸುವುದಕ್ಕೆ ನಿಷೇಧ ವಿಧಿಸಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ನ್ಯಾಯಪೀಠ, ವಿಚಾರಣೆ ಇತ್ಯರ್ಥ ಆಗುವವರೆಗೆ ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು, ಹಿಜಬ್ ಧರಿಸಿ ಪ್ರವೇಶಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಹೊರಡಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ವಿವಾದ ನಿನ್ನೆ ಮೊನ್ನೆಯದಲ್ಲ. ಬಹುಸಂಸ್ಕೃತಿ, ಧರ್ಮಗಳ ನೆಲೆವೀಡಾದ ಭಾರತದ ವಿವಿಧ ರಾಜ್ಯಗಳಲ್ಲೂ ಈ ಹಿಂದೆಯೂ ಹಿಜಬ್ ವಿವಾದ ಸೃಷ್ಟಿಯಾಗಿತ್ತು. ಆಯಾ ರಾಜ್ಯಗಳ ಹೈಕೋರ್ಟ್‌ಗಳು ತೀರ್ಪುಗಳನ್ನೂ ಪ್ರಕಟಿಸಿ ವಿವಾದಕ್ಕೆ ತೆರೆ ಎಳೆದಿವೆ. ಹಾಗಾದರೆ ಯಾವ್ಯಾವ ರಾಜ್ಯಗಳಲ್ಲಿ ಹಿಜಬ್ ವಿವಾದ ಸೃಷ್ಟಿಯಾಗಿತ್ತು. ಅಲ್ಲಿನ ಹೈಕೋರ್ಟ್‌ಗಳ ತೀರ್ಪುಗಳೇನು? ಇಲ್ಲಿದೆ ವಿವರ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
Advertisement
Advertisement
ಕೇರಳ ಹೈಕೋರ್ಟ್, 2018: 12 ಮತ್ತು 8 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತ ಬಾಲಕಿಯರ ತಂದೆ ಮೊಹಮ್ಮದ್ ಸುನೀರ್ ಅವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ನಿಗದಿತ ವಸ್ತ್ರ ಸಂಹಿತೆಗೆ ವಿರುದ್ಧವಾದ ಕಾರಣ ಪೂರ್ಣ ತೋಳಿನ ಶರ್ಟ್ ಮತ್ತು ಹಿಜಬ್ ಧರಿಸಲು ಶಾಲೆಯು ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿದ್ದರು. ಕೇರಳ ಹೈಕೋರ್ಟ್ ಏಕಸದಸ್ಯ ಪೀಠವು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಾದ ಕ್ರಿಶ್ಚಿಯನ್ ಮಿಷನರಿ ಶಾಲೆಯ ಪರವಾಗಿ ತೀರ್ಪು ನೀಡಿತು. ವಿದ್ಯಾರ್ಥಿಗಳ ವೈಯಕ್ತಿಕ ಹಕ್ಕುಗಳಿಗಿಂತ ‘ಶಾಲೆಯ ಸಾಮೂಹಿಕ ಹಕ್ಕು’ಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ನ್ಯಾಯಾಲಯ ಪ್ರತಿಪಾದಿಸಿತ್ತು.
Advertisement
ಈ ಪ್ರಕರಣ ಕುರಿತು ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲ ದೇವದತ್ತ ಕಾಮತ್ ಅವರು ಗುರುವಾರ ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರಿ ಸಂಸ್ಥೆಯಲ್ಲ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಉಲ್ಲೇಖವಾಗಿದೆ. ಹೀಗಾಗಿ ಅದನ್ನು ಪೂರ್ವನಿದರ್ಶನವಾಗಿ ಪರಿಗಣಿಸಲಾಗುವುದಿಲ್ಲ. ಸಾಂವಿಧಾನಿಕವಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ನಿರ್ಧಾರ ಕೈಗೊಳ್ಳುವಲ್ಲಿ ಹೆಚ್ಚಿನ ಸ್ವಾತಂತ್ರ‍್ಯವನ್ನು ಹೊಂದಿವೆ ಎಂದು ವಾದಿಸಿದ್ದರು. ಇದನ್ನೂ ಓದಿ: ಹಿಜಾಬ್ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ: ಈರಣ್ಣ ಕಡಾಡಿ
Advertisement
ಬಾಂಬೆ ಹೈಕೋರ್ಟ್, 2003: ವಿದ್ಯಾರ್ಥಿನಿಯೊಬ್ಬರು ಹಿಜಬ್ ಧರಿಸಲು ಅನುಮತಿ ನೀಡುತ್ತಿಲ್ಲ ಎಂದು ಶಾಲೆಯ ನಿಗದಿತ ವಸ್ತ್ರ ಸಂಹಿತೆಯನ್ನು ಪ್ರಶ್ನಿಸಿದ್ದಳು. ಆದರೆ ಬಾಂಬೆ ಹೈಕೋರ್ಟ್ ಆಕೆಯ ವಿರುದ್ಧ ತೀರ್ಪು ನೀಡಿತ್ತು. ಈ ವೇಳೆ ಹೈಕೋರ್ಟ್ ಖುರಾನ್‌ನ ಸಂಬಂಧಿತ ಶ್ಲೋಕಗಳನ್ನು ಉಲ್ಲೇಖಿಸಿತ್ತು. ಮಹಿಳೆಯರು ಹಿಜಬ್ ಧರಿಸಬೇಕು ಎಂದು ಸೂಚಿಸಿಲ್ಲ ಎಂದು ತೀರ್ಪಿನಲ್ಲಿ ಹೇಳಿತ್ತು.
ಮದ್ರಾಸ್ ಹೈಕೋರ್ಟ್, 2004: ಈ ಪ್ರಕರಣದಲ್ಲಿ ಶಾಲಾ ಶಿಕ್ಷಕರ ಮೇಲೆಯೇ ಆಡಳಿತ ಮಂಡಳಿ ವಸ್ತ್ರ ಸಂಹಿತೆ ನಿಯಮ ಹೇರಲಾಗಿತ್ತು. ವಸ್ತ್ರ ಸಂಹಿತೆ ಹೇರಿಕೆಗೆ ಯಾವುದೇ ಶಾಸನಬದ್ಧ ಬೆಂಬಲವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದರೂ, ಶಿಕ್ಷಕರು ಶಿಸ್ತನ್ನು ಕಾಪಾಡಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಇದನ್ನೂ ಓದಿ: ಹಿಜಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ: ಅಮೆರಿಕ
ಕರ್ನಾಟಕ ಸರ್ಕಾರದ ಆದೇಶವೇನು?
ಫೆಬ್ರವರಿ 5 ರಂದು, ಕರ್ನಾಟಕ ಸರ್ಕಾರವು ಕರ್ನಾಟಕ ಶಿಕ್ಷಣ ಕಾಯಿದೆ, 1983 ರ ಸೆಕ್ಷನ್ 133 (2) ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿ ಆದೇಶ ಪ್ರಕಟಿಸಿದೆ. ಈ ಆದೇಶದ ಅಡಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅನುಸರಿಸಲು ನಿರ್ದೇಶನಗಳನ್ನು ನೀಡಲು ರಾಜ್ಯಕ್ಕೆ ಅಧಿಕಾರವನ್ನು ನೀಡುತ್ತದೆ. 2013ರಲ್ಲಿ ಈ ನಿಬಂಧನೆಯ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸುವ ನಿರ್ದೇಶನವನ್ನು ರಾಜ್ಯವು ಹೊರಡಿಸಿತ್ತು. 2013ರ ನಿರ್ದೇಶನವನ್ನು ಉಲ್ಲೇಖಿಸಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶವನ್ನು ಹೊರಡಿಸಿದೆ.