ಬೆಂಗಳೂರು: ಹಿಜಬ್ ವಿವಾದದ ಬಗ್ಗೆ ಶಾಸಕ ಜಮೀರ್ ಅಹಮದ್ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಈ ಬಗ್ಗೆ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡುತ್ತೇವೆ. ಅವರು ಆ ಮಾತನ್ನು ವಾಪಸ್ ಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ವಪಕ್ಷೀಯ ಶಾಸಕರ ವಿರುದ್ಧ ಗರಂ ಆಗಿದ್ದಾರೆ.
ನಿನ್ನೆ ಜಮೀರ್, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿ, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಜಮೀರ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ
ಹಿಜಬ್ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರ ಮೇಲೆ ರಾಷ್ಟ್ರ ದ್ರೋಹದ ಕೇಸ್ ದಾಖಲಿಸಬೇಕು. ಮಂತ್ರಿಯಾದರೇನು,ಶಾಸಕರಾದರೇನು..? ಅವರ ಮೇಲೆ ಮೊದಲು ಕೇಸ್ ರಿಜಿಸ್ಟರ್ ಮಾಡಬೇಕು. ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಎಲ್ಲಾ ಚಿಹ್ನೆಗಳನ್ನು ನಾಶ ಮಾಡ್ತಿದೆ ಬಿಜೆಪಿ: ಹಿಜಬ್ ಕುರಿತು ಮುಫ್ತಿ ಪ್ರತಿಕ್ರಿಯೆ
ರಾಜ್ಯದಲ್ಲಿ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಅನ್ಯಾಯವಾಗುತ್ತಿದೆ, ನಾರಾಯಣಗುರು ವಿಚಾರದಲ್ಲಿ ಅನ್ಯಾಯವಾಗುತ್ತಿದೆ, ಬಿಟ್ ಕಾಯಿನ್, 40% ಕಮೀಷನ್ ಆರೋಪವಿದೆ. ಹಾಗಾಗಿ ಸರ್ಕಾರ ಮಕ್ಕಳನ್ನು ಎತ್ತಿ ಕಟ್ಟುತ್ತಿದೆ ಇದನ್ನು ವಿರೋಧಿಸಿ ನಾವು ಜಂಟಿ ಅಧಿವೇಶನದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ದೇವೆ ಎಂದರು.
ಸರ್ಕಾರ, ಸರ್ಕಾರಿ ಅಧಿಕಾರಿಗಳನ್ನು ಮತ್ತು ಪೊಲೀಸರನ್ನು ಬಳಸಿಕೊಳ್ಳುತ್ತಿದೆ. ಅವರ ಪಾರ್ಟಿಯವರ ಮೇಲೆ ಕೇಸ್ ಹಾಕಲ್ಲ. ರೈತರ ಮೇಲೆ ಕೇಸ್ ಹಾಕ್ತೀರ, ಸಣ್ಣ, ಪುಟ್ಟವರ ಮೇಲೆ ಕೇಸ್ ಹಾಕ್ತೀರ ದೇಶದ್ರೋಹಿಗಳ ಮೇಲೆ ಯಾಕೆ ಕೇಸ್ ಹಾಕಲ್ಲ ಎಂದು ಪ್ರಶ್ನಿಸಿದ್ದಾರೆ.