ಮೈಸೂರು: ಸಮಾಜದಲ್ಲಿ ಅಶಾಂತಿ ಮೂಡಿದ್ದರೂ ಧ್ವನಿ ಎತ್ತದೇ ಧರ್ಮ ಗುರುಗಳು, ಧಾರ್ಮಿಕ ಮುಖಂಡರು ಎಲ್ಲಿ ಹೋದರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಹೋದ್ರಪ್ಪ ಧರ್ಮ ಗುರುಗಳು, ಧಾರ್ಮಿಕ ಮುಖಂಡರು? ಕೇವಲ ಅನುದಾನಕ್ಕಾಗಿ ನೀವು ಸೀಮಿತವಾದರೆ, ಸಮಾಜದಲ್ಲಿ ಅಶಾಂತಿ ಮೂಡಿದ್ದರೂ ಏಕೆ ಧ್ವನಿ ಎತ್ತುತ್ತಿಲ್ಲ. ಮಠಾಧೀಶರು, ಧರ್ಮ ಗುರುಗಳು ಧ್ವನಿ ಎತ್ತದಿರುವುದು ದುರಂತ. ಬೆಕ್ಕಿಗೆ ಘಂಟೆ ಕಟ್ಟುವವರಾರು ಎಂಬಂತಾಗಿದೆ. ಸಂಘ ಸಂಸ್ಥೆಗಳು ಏನ್ ಮಾಡ್ತಿವೆ? ಎಲ್ಲಾ ಧರ್ಮಗುರುಗಳು ಒಟ್ಟಾಗಿ ಕುಳಿತು ಚರ್ಚೆ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಹಿಜಬ್ ಅರ್ಜಿ ವರ್ಗಾವಣೆ
ಹಿಂದೂ ಕೋಮುವಾದ, ಮುಸ್ಲಿಂ ಮತೀಯವಾದ ಎರಡು ವಿಜೃಂಭಿಸುತ್ತಿವೆ. ಧರ್ಮ ಮನೆ ಒಳಗೆ ಇರಬೇಕು, ಸಾರ್ವಜನಿಕವಾಗಿ ಪ್ರದರ್ಶಿಸಬಾರದು. ಬಿಜೆಪಿಯ ಕೆಲವು ವ್ಹಿಂಗ್‌ಗಳು ಕೇಸರಿ ಶಾಲಿನ ವಿಚಾರದಲ್ಲಿ ಗಲಾಟೆ ಮಾಡುತ್ತಿವೆ. ಕೆಲ ಮುಸ್ಲಿಂ ಮತಾಂಧರು ಹಿಜಬ್ ಹೆಸರಿನಲ್ಲಿ ಗಲಾಟೆ ಸೃಷ್ಟಿಸಿದ್ದಾರೆ ಎಂದು ದೂರಿದ್ದಾರೆ.
ಹಿಜಬ್, ಕೇಸರಿ ಶಾಲಿಗಿಂತ ಶಿಕ್ಷಣ ದೊಡ್ಡದು. ಹಿಜಬ್, ಕೇಸರಿ ಶಾಲು ಮನೆ ಒಳಗೆ ಹಾಕಿ. ಅದನ್ನು ಶಾಲೆಗೆ ತರಬೇಡಿ. ಸಮವಸ್ತ್ರದಲ್ಲಿ ಧರ್ಮದ ಸಂಕೇತ ಬಿಂಬಿಸುವುದು ಬೇಡ. ವೋಟಿನ ಸಲುವಾಗಿ ಮಕ್ಕಳ ಉಪಯೋಗಿಸಬೇಡಿ, ಶಿಕ್ಷಣ ಕ್ಷೇತ್ರದಲ್ಲಿ ವೋಟಿನ ರಾಜಕಾರಣ ಮಾಡಬೇಡಿ. ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಮಕ್ಕಳಲ್ಲಿ ವಿಷ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಮೂರು ಜನ ಕಲ್ಲು ಹೊಡೆದರೆ, ಮೂರು ದಿನ ಶಾಲೆ ಮುಚ್ಚಿದ್ದು ತಪ್ಪು. ಕಲ್ಲು ತೂರಿದವರನ್ನು ಪತ್ತೆ ಹಚ್ಚಿ ಒದ್ದು ಒಳಗೆ ಹಾಕುವುದ ಬಿಟ್ಟು ಶಾಲೆಗೆ ರಜೆ ಕೊಟ್ಟಿದ್ದು ಸರಿಯಲ್ಲ. ಮಂಡ್ಯದ ಶಾಲೆಯಲ್ಲಿ ಗಲಾಟೆ ಆಗಿದೆ. ಮಂಡ್ಯ ಜಿಲ್ಲಾ ಮಂತ್ರಿ, ಎಸ್ಪಿ ಎಲ್ಲಿದ್ದಾರೆ? ಗಲಾಟೆ ಆಗ್ತಿದ್ದರೂ ಏನ್ ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹಿಜಬ್ ವಿವಾದ ತಮಿಳುನಾಡಿಗೆ ಬರುವುದು ಬೇಡ: ಕಮಲ್ ಹಾಸನ್