– ವರ್ತೂರು ವ್ಯಕ್ತಿಯಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ
ಬೆಂಗಳೂರು: ಕೊಲೆ, ಮಾನನಷ್ಟ, ಜಮೀನು ವಿವಾದ ಇತ್ಯಾದಿ ವಿಚಾರಗಳಿಗೆ ಸಂಬಂಧ ಪಟ್ಟ ಕೇಸ್‍ಗಳು ನ್ಯಾಯಾಲಯಕ್ಕೆ ಬರುವುದು ಸಾಮಾನ್ಯ. ಆದರೆ ಮನೆಯ ಗೃಹ ಪ್ರವೇಶದಂದು ಹೆಲಿಕಾಪ್ಟರ್‍ನಿಂದ ಪುಷ್ಪಾರ್ಚನೆ ನಡೆಸಲು ನಾನು ಮುಂದಾಗಿದ್ದು, ಅನುಮತಿ ನೀಡಬೇಕು ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Advertisement
ಮುನಿರಾಜು ಎಂಬವರು ವರ್ತೂರಿನಲ್ಲಿ ಮನೆ ಕಟ್ಟಿಸಿದ್ದು, ಮನೆಯ ಗೃಹಪ್ರವೇಶ ಸಮಾರಂಭ ಫೆ.9ರಂದು ನಡೆಯಲಿದೆ. ಈ ಗೃಹಪ್ರವೇಶ ಸಮಾರಂಭಕ್ಕೆ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಪೊಲೀಸರಲ್ಲಿ ಅನುಮತಿ ಕೇಳಿದ್ದಾರೆ. ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಪೊಲೀಸರು ಅನುಮತಿ ನೀಡದ್ದಕ್ಕೆ ಅವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
Advertisement
ಇಂದು ಅರ್ಜಿ ವಿಚಾರಣೆ ವೇಳೆ ಮುನೀರಾಜು ಪರ ವಕೀಲರು, ಪಕ್ಕದ ಮನೆಯ ನಿವಾಸಿಯೊಬ್ಬರು ಗೃಹಪ್ರವೇಶ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಿದ್ದಾರೆ. ಹೀಗಾಗಿ ಮುನಿರಾಜು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ಮಾಡಲೇಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪುಷ್ಪಾರ್ಚನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.
Advertisement
ಆದ್ರೆ ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು ಅರ್ಜಿದಾರನನ್ನು, ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ನಡೆಸಲು ಹೈಕೋರ್ಟಿಗೆ ಬರಬೇಕೇ? ಪಕ್ಕದ ಮನೆಯವನು ಮಾಡುತ್ತಾನೆ ಎಂದು ನೀವು ಆತನನ್ನು ಅನುಸರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
Advertisement
ಅಷ್ಟೇ ಅಲ್ಲದೇ ಈ ರೀತಿ ಹಣ ಪೋಲು ಮಾಡುವ ಬದಲು ಬಡವರಿಗೆ ನೆರವಾಗಬಹುದಲ್ಲವೇ? ಮುಂಬೈ ಶ್ರೀಮಂತರೊಬ್ಬರು ಮಗಳ ಅದ್ಧೂರಿ ಮದುವೆ ಬದಲು ಮನೆಯನ್ನು ಹಂಚಿದ್ದಾರೆ. ಬಡವರಿಗಾಗಿ ನಾರಾರು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ನೀವು ಯಾಕೆ ಆ ರೀತಿ ಮಾಡಬಾರದು. ಒಣ ಆಡಂಬರ ಯಾಕೆ ಬೇಕು ಎಂದು ಪ್ರಶ್ನಿಸಿದರು.
ನ್ಯಾಯಾಧೀಶರು ಉದಾಹರಣೆಯೊಂದಿಗೆ ಸಲಹೆ ನೀಡಿದರೂ ಅರ್ಜಿದಾರರಾದ ಮುನಿರಾಜು ತಮ್ಮ ಪಟ್ಟನ್ನು ಬಿಡಲೇ ಇಲ್ಲ. ಹೀಗಾಗಿ ನ್ಯಾಯಾಧೀಶರು ಹೆಲಿಕಾಪ್ಟರ್‍ನಲ್ಲಿ ಪುಷ್ಪಾರ್ಚನೆ ನಡೆಸಲು ಅನುಮತಿ ನೀಡಲು ಕಾನೂನು ಬದ್ಧ ಹಕ್ಕು ಇದೆಯೇ? ಇದರ ಬಗ್ಗೆ ನಿಲುವು ಏನು ಎಂದು ಸರ್ಕಾರಿ ವಕೀಲರಿಗೆ ಪ್ರಶ್ನಿಸಿ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದರು.