ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎದುರು ಡಾ.ಉಮೇಶ್ ಜಾಧವ್ ಸ್ಪರ್ಧೆಯಿಂದ ಕಲಬುರಗಿ ಲೋಕಸಭೆ ಇದೀಗ ಸ್ಟಾರ್ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಟ ಅಂದ್ರು 200 ಕೋಟಿಗೂ ಅಧಿಕ ಕುರುಡು ಕಾಂಚಾಣ ಹರಿಯಲ್ಲಿದೆಯಂತೆ. ಹೀಗಾಗಿ ಚುನಾವಣಾ ಆಯೋಗ ಈ ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಕಲಬುರಗಿ ಲೋಕಸಭೆ ಮೀಸಲು ಕ್ಷೇತ್ರ ಇದೀಗ ರಾಷ್ಟ್ರಮಟ್ಟದ ಟಾಪ್ 10 ಕ್ಷೇತ್ರಗಳಲ್ಲಿ ಒಂದಾಗಿದೆ. ಯಾಕಂದ್ರೆ ಈ ಕ್ಷೇತ್ರದಿಂದ ಕಾಂಗ್ರೆಸ್ ಸಂಸದ ಹಾಗೂ ಸೋಲಿಲ್ಲದ ಸರ್ದಾರ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾದ್ರೆ, ಇತ್ತ ಬಿಜೆಪಿಯಿಂದ ಕಾಂಗ್ರೆಸ್ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಹುತೇಕ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಇವರಿಬ್ಬರ ನಡುವಿನ ಫೈಟ್ ಜಿಲ್ಲೆಯ ರಾಜಕಾರಣದಲ್ಲಿ ಹುಬ್ಬೆರಿಸುವಂತೆ ಮಾಡಿದೆ. ಚುನಾವಣೆಯ ದಿನಾಂಕ ನಿಗದಿಯಾಗದಿದ್ರು ಈ ಇಬ್ಬರು ಅಭ್ಯರ್ಥಿಗಳು ಇದೀಗ ಜಿಲ್ಲೆಯ ಗಲ್ಲಿ ಗಲ್ಲಿಗಳಿಗೆ ತೆರಳಿ ಮತ ಬೇಟೆ ಶುರು ಮಾಡಿದ್ದಾರೆ.
ಶತಾಯಗತಾಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸಬೇಕೆಂದು ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಇತ್ತ ಸೋಲಿಲ್ಲದ ಸರ್ದಾರ ಪಟ್ಟ ಉಳಿಸಿಕೊಳ್ಳಲು ಖರ್ಗೆ ಸಹ ಫೀಲ್ಡ್ ಗಿಳಿದಿದ್ದಾರೆ. ಈ ಮದಗಜಗಳ ಜಗಳದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಬೇಕು ಅಂತಾ ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿವೆ. ಪರಿಣಾಮ ಕಲಬುರಗಿ ಲೋಕಸಭಾ ಕ್ಷೇತ್ರವೊಂದರಲ್ಲೇ 200 ಕೋಟಿಗೂ ಹೆಚ್ಚು ಹಣದ ಹೊಳೆ ಹರಿಸಲು ಎರಡು ಪಕ್ಷಗಳ ಸಿದ್ದತೆ ನಡೆಸಿವೆಯಂತೆ. ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರಕ್ಕೆ ಕನಿಷ್ಟ ಅಂದ್ರು 12 ರಿಂದ 15 ಕೋಟಿ ರೂಪಾಯಿ ಹಂಚಲು ಎರಡು ಪಕ್ಷಗಳು ನಿರ್ಧರಿಸಿದ್ದು, ಈಗಾಗಲೇ ಹಣ ಹಂಚಿಕೆಯ ಬ್ಲೂ ಪ್ರಿಂಟ್ ಕೂಡ ರೆಡಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕುರುಡು ಕಾಂಚಾಣಾ ಹರಿಯುವ ಹಿನ್ನೆಲೆ ಕಲಬುರಗಿ ಲೋಕಸಭೆ ಮೇಲೆ ಕೇಂದ್ರ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಬೇಟೆಯಾಡಲು ಸಜ್ಜಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv