ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಇನ್ನೂ ಕಾಡುತ್ತಿದೆಯಾ ಆಪರೇಷನ್ ಕಮಲ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿಬರುತ್ತಿದೆ. ಯಾಕಂದ್ರೆ ಇಬ್ಬರು ಕೈ ಶಾಸಕರಿಗೆ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಭದ್ರತೆ ಒದಗಿಸುತ್ತಿದ್ದಾರೆ ಎಂಬ ವಿಚಾರವೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಕಾಂಗ್ರೆಸ್ ನಾಯಕರು ಹದ್ದಿನ ಕಣ್ಣಿಟ್ಟಿದ್ದಾರೆ. ಸೋಮವಾರ ರಾತ್ರಿ ಮಾಜಿ ಸಚಿವ ಡಿಕೆಶಿ ತಾವು ವಾಸ್ತವ್ಯವಿದ್ದ ಹೋಟೆಲಿಗೆ ಇಬ್ಬರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ಮೂಲಕ ಈ ಇಬ್ಬರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
Advertisement
ವಿಶ್ವಾಸಮತ ಸಾಬೀತು ಪಡಿಸುವವರೆಗೆ ಡಿಕೆಶಿ ಕಣ್ಗಾವಲಿನಲ್ಲಿ ಪ್ರತಾಪ್ ಗೌಡ ಮತ್ತು ಆನಂದ್ ಸಿಂಗ್ ಇರಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಶಾಸಕರಿದ್ದ ಹೋಟೆಲ್ ನಲ್ಲಿ ಈ ಇಬ್ಬರು ಶಾಸಕರೂ ಕೂಡ ವಾಸ್ತವ್ಯ ಹೂಡಲಿದ್ದಾರೆ. ಮತ್ತೆ ಬಿಜೆಪಿ ಕಡೆ ಯಾವುದೇ ಕಾರಣಕ್ಕೂ ಹೋಗಬೇಡಿ ಅಂತ ಡಿಕೆಶಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ದೊರೆತಿದೆ.
Advertisement
ರಾಜ್ಯ ವಿಧಾನಸಭಾ ಫಲಿತಾಂಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಜಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. ಆದ್ರೂ ನಾನೇ ಸಿಎಂ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪ ಅವರು ರಾಜ್ಯಪಾಲರ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡು ಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಹೀಗಾಗಿ ಭಾರೀ ಹೈಡ್ರಾಮಾವೇ ನಡೆದಿತ್ತು.
Advertisement
ಇತ್ತ ವಿಧಾನಸಭಾ ಕಲಾಪ ನಡೆಯುತ್ತಿದ್ದಂತೆಯೇ ಶಾಸಕ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಬಾರದೇ ಇರುವುದು ಕಾಂಗ್ರೆಸ್ ಗೆ ಭಾರೀ ಆತಂಕವೇ ಎದುರಾಗಿತ್ತು. ಕೊನೆಗೆ ಡಿಕೆಶಿ ಅವರೇ ಈ ಇಬ್ಬರು ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ವಿಶ್ವಾಸ ಮತ ಸಾಬೀತು ಪಡಿಸುವವರೆಗೆ ಆಪರೇಷನ್ ಕಮಲದ ಭೀತಿಯಿದ್ದು, ಪರಿಣಾಮ ಇಬ್ಬರು ಶಾಸಕರು `ಕೈ’ ಬಿಟ್ಟು ಹೋಗದಂತೆ ಕಾಂಗ್ರೆಸ್ ನಾಯಕರು ನೋಡಿಕೊಳ್ಳುತ್ತಿದ್ದಾರೆ.