ಬೆಂಗಳೂರು: ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ಮೊದಲು ಮಾತುಕತೆ ನಡೆಸಿ ತೀರ್ಮಾನಕ್ಕೆ ಬನ್ನಿ. ಈ ಕೂಡಲೇ ಮುಷ್ಕರವನ್ನು ಕೈಬಿಡಿ ಎಂದು ಹೈಕೋರ್ಟ್ ಖಾಸಗಿ ಆಸ್ಪತ್ರೆಗಳ ವೈದ್ಯರಲ್ಲಿ ಮನವಿ ಮಾಡಿದೆ.
ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಗುರುವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಸರ್ಕಾರದ ಪರ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್, ನಾವು ಇನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಮಂಡನೆ ಮಾಡಿಲ್ಲ. ಅಷ್ಟೇ ಅಲ್ಲದೇ ವೈದ್ಯರ ಜೊತೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾತುಕತೆ ನಡೆಸಲು ಸಿದ್ಧರಿದ್ದಾರೆ. ಆದರೂ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ ಎಂದು ವಾದಿಸಿದರು.
ಮಧ್ಯಪ್ರವೇಶ ಮಾಡಿದ ಖಾಸಗಿ ವೈದ್ಯರ ಪರ ವಕೀಲ ಬಸವರಾಜು, ಈ ಮಸೂದೆ ಮಂಡನೆಯಾದರೆ ವೈದ್ಯರು ತಮ್ಮ ವೃತ್ತಿಯನ್ನೇ ಬಿಡಬೇಕಾಗುತ್ತದೆ. ಅಷ್ಟೇ ಅಲ್ಲದೇ ವೈದ್ಯರು ಸ್ವಯಂ ಪ್ರೇರಿತರಾಗಿ ಮುಷ್ಕರ ಮಾಡುತ್ತಿದ್ದಾರೆ ಹೊರತು ಭಾರತೀಯ ವೈದ್ಯ ಸಂಘ(ಐಎಂಎ) ಮುಷ್ಕರಕ್ಕೆ ಕರೆ ನೀಡಿಲ್ಲ. ಆರೋಗ್ಯ ಸಚಿವರು ವೈದ್ಯರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ವಾದ ಮಂಡಿಸಿದರು.
ಈ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್, ಈಗಾಗಲೇ ಮುಷ್ಕರದಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಿಮ್ಮ ವೈದ್ಯರಿಗೆ ಮುಷ್ಕರ ವಾಪಸ್ ಪಡೆಯಲು ಹೇಳಿ ಎಂದು ವಕೀಲರಲ್ಲಿ ಮನವಿ ಮಾಡಿದರು.
ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ಈಗಾಗಲೇ ಹೇಳಿದೆ. ಅಷ್ಟೇ ಅಲ್ಲದೇ ಅಧಿವೇಶನದಲ್ಲಿ ಇನ್ನೂ ಮಸೂದೆ ಮಂಡನೆಯೇ ಆಗಿಲ್ಲ. ರೋಗಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ಇದು ಜನರ ಜೀವನ್ಮರಣದ ಪ್ರಶ್ನೆ. ಕೂಡಲೇ ಸೇವೆಗೆ ಮರಳಿ ಚಿಕಿತ್ಸೆ ನೀಡಿ ಎಂದು ನ್ಯಾಯಮೂರ್ತಿಗಳು ಪರಿಪರಿಯಾಗಿ ಮನವಿ ಮಾಡಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಒಂದು ವೇಳೆ ಮುಷ್ಕರ ಕೈ ಬಿಡದೇ ಇದ್ದಲ್ಲಿ ಶುಕ್ರವಾರ ಹೈಕೋರ್ಟ್ ಖಡಕ್ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.
img class=”alignnone size-full wp-image-194314″ src=”https://publictv.in/wp-content/uploads/2017/11/doctors-protest-19.png” alt=”” width=”786″ height=”576″ />