ಸಚಿವ ಕೆ.ಜೆ ಜಾರ್ಜ್ ಪುತ್ರನ ಅರಣ್ಯದೊಳಗಿನ ಜಮೀನಿಗೆ ದಾರಿ ಬಂದ್‌ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

Public TV
3 Min Read
COURT

ಮಡಿಕೇರಿ: ರಾಜ್ಯ ಸರ್ಕಾರದ ಇಂಧನ ಸಚಿವರಾಗಿರುವ ಕೆ.ಜೆ ಜಾರ್ಜ್ (KJ George) ಅವರ ಪುತ್ರ ರಾಣಾ ಜಾರ್ಜ್ ಅವರು ಹೆಚ್.ಡಿ ಕೋಟೆ ಬಳಿಯ ಗ್ರಾಮಗಳ ಅರಣ್ಯದೊಳಗೆ ಕೃಷಿ ಸಂಬಂಧಿತ ತೋಟ ಹಾಗೂ ಜಮೀನು ಹೊಂದಿದ್ದಾರೆ. ಆದರೆ, ಅರಣ್ಯದೊಳಗಿರುವ ಜಮೀನಿಗೆ ಹೋಗದಂತೆ ರಾಜ್ಯ ಸರ್ಕಾರ ತಡೆ ನೀಡಿತ್ತು. ಈ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಹೈಕೋರ್ಟ್‌ (Karnataka Highcourt) ವಿಚಾರಣೆ ಬಳಿಕ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವರು, ಕೋರ್ಟ್‌ ತೀರ್ಮಾನ ಏನೇ ಬಂದರೂ ಎಲ್ಲರೂ ತಲೆಬಾಗಬೇಕು ಎಂದಿದ್ದಾರೆ.

KJ George

ಸರ್ಕಾರದ ವಿರುದ್ಧ ತಮ್ಮ ಮಗ ಹೋಗಿದ್ದಾರೆ. ಎಂದು ಯಾಕೆ ಹೇಳುತ್ತೀರಿ ಅವರು ತಮ್ಮ ಹಕ್ಕನ್ನು ಕೋರ್ಟ್‌ನಲ್ಲಿ‌ ಕೇಳಿದ್ದಾರೆ. ‌ನಾನು ಮಂತ್ರಿಯಾಗಿ ಪ್ರಭಾವ ಬೀರಿ ಅದಕ್ಕೆ ಅನುಮತಿ ನೀಡಿದ್ರೆ ಮಾದ್ಯಮಗಳಲ್ಲೇ ಅಧಿಕಾರ ದುರುಪಯೋಗ ಮಾಡಿದ್ದೀರಿ ಎಂದು ಹೇಳುತ್ತಿದ್ದರು. ತಮ್ಮ ಮಗ ರಾಣಾ ಜಾರ್ಜ್‌ (Rana George) ಅವರು ತಮ್ಮ ಹಕ್ಕನ್ನು ಕಾನೂನು ರೀತಿಯಲ್ಲಿ ಕೋರ್ಟ್‌ಗೆ ಹೋಗಿ ಕೇಳಿದ್ದಾರೆ. ಕೋರ್ಟ್‌ನಲ್ಲಿ ಈ ಪ್ರಕರಣ ಇರುವಾಗ ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ. ತೀರ್ಪು ಏನೇ ಬಂದರೂ ತಲೆಬಾಗುತ್ತೇನೆ ಎಂದು ತಿಳಿಸಿದ್ದಾರೆ. ಇದ‌ನ್ನೂ ಓದಿ: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ? – ಗುರುತು ಪತ್ತೆಗೆ ಪೊಲೀಸರ ಹರಸಾಹಸ

ಏನಿದು ಪ್ರಕರಣ..?
ಮೈಸೂರು ಜಿಲ್ಲೆಯ ಹೆಚ್‌.ಡಿ.ಕೋಟೆ ಬಳಿಯ ಶಂಭುಗೌಡನಹಳ್ಳಿ, ಲಕ್ಕಸೋಗೆ ಗ್ರಾಮಗಳಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್‌ ಜಮೀನು ಹೊಂದಿದ್ದಾರೆ. ಈ ಜಮೀನಿಗೆ ಹೋಗಬೇಕೆಂದರೆ ಹೆಚ್.ಡಿ ಕೋಟೆಯ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ಜಮೀನಿಗೆ ಹೋಗಬೇಕು. ಆದರೆ, ರಾಜ್ಯ ಸರ್ಕಾರದಿಂದ ಅರಣ್ಯದೊಳಗೆ ಜಮೀನಿಗೆ ಹೋಗಲು ಹಾದಿ ಬಳಕೆ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಕುಪಿತಗೊಂಡ ರಾಣಾ ಜಾರ್ಜ್ ಸರ್ಕಾರದ ನಿರ್ಬಂಧವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರಣ್ಯದಲ್ಲಿ ಜಮೀನನ್ನು ಹೊಂದಿದವರು ತಮ್ಮ ಜಮೀನಿಗೆ ಹೋಗಲು ಅವಕಾಶ ನೀಡಬೇಕು. ರಾತ್ರಿ ಹಾಗೂ ಹಗಲಿನ ಸಮಯದಲ್ಲಿ ಅನಿರ್ಬಂಧಿವಾಗಿ ಸಂಚರಿಸಲು ಅನುಮತಿ ಅಗತ್ಯವಿದೆ. ಅನುಮತಿ ನೀಡುವಂತೆ ಅರಣ್ಯಾಧಿಕಾರಿಗೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಇದ‌ನ್ನೂ ಓದಿ: BBK 11: ಕಿಚ್ಚನ ಕೋಪಕ್ಕೆ ಚೈತ್ರಾ ಕುಂದಾಪುರ ಗಪ್‌ ಚುಪ್‌- ಅಷ್ಟಕ್ಕೂ ಆಗಿದ್ದೇನು?

ಈ ವೇಳೆ ರಾಣಾ ಜಾರ್ಜ್‌ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು, ಅಭಯಾರಣ್ಯದ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವವರಿಗೆ ಸಂಚರಿಸಲು ವಿನಾಯಿತಿ ಇದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಕಲಂ 27(1)(ಸಿ) ಅಡಿ ವಿನಾಯಿತಿ ಇದೆ. ಆದರೆ, ಅರಣ್ಯ ಇಲಾಖೆ ಅರ್ಜಿದಾರರ ವಿರುದ್ಧ ಕಾನೂನುಬಾಹಿರ ಆದೇಶ ಹೊರಡಿಸಿದೆ. ಇದು ಸಂವಿಧಾನದ 19 (1)(ಡಿ) ವಿಧಿಗೆ ವ್ಯತಿರಿಕ್ತವಾಗಿದೆ. ಮುಕ್ತಸಂಚಾರಕ್ಕೆ ಅಡ್ಡಿ ಮಾಡಿರುವ ಅರಣ್ಯ ಇಲಾಖೆಯ ಈ ನಿರ್ಬಂಧವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಇದ‌ನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ದೂರು – ನಡ್ಡಾ, ಖರ್ಗೆಯಿಂದ ಸ್ಪಷ್ಟನೆ ಕೇಳಿದ ಚುನಾವಣಾ ಆಯೋಗ

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠ ರಾಣಾ ಜಾರ್ಜ್ ಪರ ವಕೀಲರು ಹಾಗೂ ರಾಜ್ಯ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದೆ. ನಂತರ ಅರಣ್ಯ ಇಲಾಖೆಯ ನಿಯಮಾವಳಿಯಲ್ಲಿ ಜಮೀನಿಗೆ ಹೋಗಲು ಅವಕಾಶ ನೀಡಬೇಕು ಎಂಬ ಬಗ್ಗೆ ಉಲ್ಲೇಖವಿದ್ದರೂ, ನಿರ್ಬಂಧ ವಿಧಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ, ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಮುಂದಿನ ವಿಚಾರಣೆಯನ್ನು ನ.29ಕ್ಕೆ ಮುಂದೂಡಿಕೆ ಮಾಡಿದ್ದಾರೆ.

Share This Article