– ಮಂಗಳೂರು, ಕಾರವಾರ, ಉಡುಪಿ ಕಡಲತೀರದಲ್ಲಿ ತೀವ್ರ ನಿಗಾ
ಮಂಗಳೂರು/ಕಾರವಾರ/ಉಡುಪಿ: ಪಾಕಿಸ್ತಾನದ (Pakistan) ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಕಾರವಾರದಲ್ಲಿ ಕದಂಬ ನೌಕಾ ನೆಲೆ (Karwar Naval Base) ಹಾಗೂ ಬಂದರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕರಾವಳಿ ಕಾವಲುಪಡೆ, ಭಾರತೀಯ ತಟರಕ್ಷಕ ದಳದಿಂದ ತಪಾಸಣೆ ಹೆಚ್ಚಿಸಲಾಗಿದೆ. ಕಾರವಾರದ ಬಂದರಿಗೆ ಬರುವ ಅನ್ಯ ದೇಶದ ಹಡುಗುಗಳಲ್ಲಿ ಚೀನಾ, ಪಾಕಿಸ್ತಾನದ ಸಿಬ್ಬಂದಿಯಿದ್ದರೂ ನಿರ್ಬಂಧ ವಿಧಿಸಲಾಗಿದೆ. ಬಂದರಿಗೆ ಬಂದ ಹಡಗಿನಲ್ಲಿ ತೀವ್ರ ತಪಾಸಣೆ, ಮೀನುಗಾರಿಕಾ ಬೋಟ್‌ಗಳನ್ನು ಸಹ ತಪಾಸಣೆ ನಡೆಸಲಾಗುತ್ತಿದೆ. 12 ನಾಟಿಕನ್ ಮೈಲೂ ದೂರದಿಂದ ಹೊರ ಹೋಗದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದ್ದು, ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಮಂಗಳೂರು:
ಇನ್ನೂ ಮಂಗಳೂರಿನ ಕಡಲ ತೀರದಲ್ಲಿ ಕರಾವಳಿ ಕಾವಲು ಪಡೆಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿರುವ ಕರಾವಳಿ ಕಾವಲು ಪಡೆ ಪೊಲೀಸರು ಮಂಗಳೂರಿನ ಬಂದರು ಕಡಲ ತೀರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕರಾವಳಿ ಕಾವಲು ಪಡೆ ಅಧಿಕಾರಿಗಳು ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್‌ಗಳನ್ನ ತಪಾಸಣೆ ನಡೆಸಿ ಮೀನುಗಾರರ ದಾಖಲೆ ಪರಿಶಿಲಿಸಿದ್ರು. ಸದ್ಯ ಅನುಮಾನಾಸ್ಪದ ಬೋಟ್‌ಗಳ ಮೇಲೆ ನಿಗಾ ಇಟ್ಟಿರುವ ಪೊಲೀಸರು ತಪಾಸಣೆ ಮುಂದುವರಿಸಿದ್ದಾರೆ.
ಉಡುಪಿ:
ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧದ ಪ್ರಕರಣ ಬೆನ್ನಲ್ಲೇ ಉಡುಪಿಯಲ್ಲೂ ಹೈಅಲರ್ಟ್ ಮುಂದುವರಿದಿದೆ. ಕರಾವಳಿ ಕಾವಲು ಪೊಲೀಸರಿಗೆ 22 ಕಿ.ಮೀ ಆಳ ಸಮುದ್ರದಲ್ಲಿ 320 ಕಿಮೀ ಉದ್ದದಲ್ಲಿ ಕಾವಲು ಕಾಯುತ್ತಿದ್ದಾರೆ. ಈ ನಡುವೆ ಪ್ರವಾಸಿ ತಾಣಗಳ ಮೇಲೂ ನಿಗಾ ಇಡುವ ಜವಾಬ್ದಾರಿ ಸಿಎಸ್‌ಪಿ ಮೇಲೆ ಇದೆ. ಮಲ್ಪೆ ಕಡಲತೀರ, ಮರವಂತೆ, ಪಡುಬಿದ್ರೆ -ಕಾಪು ಭಾಗದಲ್ಲಿ ಸಿಎಸ್‌ಪಿ ಪಡೆ ಕಣ್ಗಾವಲು ಇಟ್ಟಿದೆ. ಕರಾವಳಿ ಭಾಗದ ರಕ್ಷಣೆ ಜೊತೆ ಪ್ರವಾಸಿಗರ ರಕ್ಷಣೆಯ ಜವಾಬ್ದಾರಿಯೆಂದು ಭಾವಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.