ಹೊಸಬರೇ ಸೇರಿ ರೂಪಿಸಿದ್ದ ‘ಇಂಟರ್ವಲ್’ (Interval Film) ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಈ ಕಾರಣದಿಂದಲೇ ಯಶಸ್ವಿಯಾಗಿ 25 ದಿನಗಳನ್ನು ದಾಟಿಕೊಂಡಿದೆ. ಪ್ರಚಾರದ ಯಾವ ಪಟ್ಟುಗಳನ್ನೂ ಪ್ರದರ್ಶಿಸದೆ, ತನ್ನೊಳಗಿನ ಕಸುವಿ ಮೂಲಕವೇ ಇಂಥಾದ್ದೊಂದು ಮೈಲಿಗಲ್ಲನ್ನು ಕ್ರಮಿಸುವಂತಾಗಿದೆ. ಈ ಚಿತ್ರದ ಮೂಲಕ ‘ಸತ್ಯ’ ಸೀರಿಯಲ್‌ನ ಬಾಲಾ ಎಂಬ ಪಾತ್ರದ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದ ಶಶಿರಾಜ್ (Shashiraj) ನಾಯಕನಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಇವರೊಂದಿಗೆ ಇನ್ನೂ ಒಂದಷ್ಟು ಮಂದಿ ಪ್ರತಿಭಾನ್ವಿತರು ‘ಇಂಟರ್ವಲ್’ ಭೂಮಿಕೆಯಲ್ಲಿ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಆ ಸಾಲಿನಲ್ಲಿ ನಾಯಕಿಯರಲ್ಲೊಬ್ಬರಾಗಿ ನಟಿಸಿರುವ ಚರಿತ್ರಾ ರಾವ್ (Charithra Rao) ಕೂಡ ಸೇರಿಕೊಂಡಿದ್ದಾರೆ. ಈ ಸಿನಿಮಾದ ಚೆಂದದ ಪಾತ್ರದ ಮೂಲಕ ಚರಿತ್ರಾ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!
ಮೂಲತಃ ರಂಗಭೂಮಿಯ ನಂಟು ಹೊಂದಿರುವ ಚರಿತ್ರಾ ರಾವ್ (Charithra Rao) ಭರತನಾಟ್ಯ ಕಲಾವಿದೆಯೂ ಹೌದು. ಸಿನಿಮಾ ನಾಯಕಿಯಾಗಲು ಬೇಕಾದ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿರುವ ಚರಿತ್ರಾ ಪಾಲಿಗೆ ಸಿನಿಮಾ ಅನ್ನೋದು ಎಳವೆಯಿಂದಲೇ ಆವರಿಸಿಕೊಂಡಿದ್ದ ಸೆಳೆತ. ಇದೀಗ ‘ಇಂಟರ್ವಲ್’ ಚಿತ್ರಕ್ಕೆ ಆಡಿಷನ್ ಕೊಟ್ಟು ಆಯ್ಕೆಯಾಗಿದ್ದ ಅವರು ನಾಯಕಿಯಾಗಿ, ಚೆಂದದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಸ್ವತಂತ್ರವಾಗಿ ಬದುಕ ಬಯಸುವ ಸ್ವಾಭಿಮಾನಿ ಹುಡುಗಿಯ ಪಾತ್ರಕ್ಕಿಲ್ಲಿ ಚರಿತ್ರಾ ರಾವ್ ಜೀವ ತುಂಬಿದ್ದಾರೆ. ಈಗಾಗಲೇ ಒಂದಷ್ಟು ಸೀರಿಯಲ್ಲುಗಳಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡಿರುವ ಈಕೆಯ ಪಾಲಿಗೆ ‘ಇಂಟರ್ವಲ್’ ಚಿತ್ರದ ಮೂಲಕ ಹಿರಿತೆರೆಯ ಅವಕಾಶಗಳ ಬಾಗಿಲು ತೆರೆದುಕೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ:ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು
ಎಂಬಿಎ ಪದವೀಧರೆಯಾಗಿರುವ ಚರಿತ್ರಾ ಈಗಾಗಲೇ ಭರತನಾಟ್ಯ ಕಲಾವಿದೆಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡಿರುವ ಚರಿತ್ರಾ, ಶಿವರಾತ್ರಿಯ ಪ್ರಯುಕ್ತ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿಯೂ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಇವರ ತಾಯಿ ಕೂಡಾ ರಂಗಭೂಮಿ ಕಲಾವಿದೆಯಾಗಿ ಹೆಸರಾಗಿರುವವರು. ಹಲವಾರು ಸೀರಿಯಲ್ಲುಗಳಲ್ಲಿ ನಟಿಸಿದ್ದ ಅವರ ಕಾರಣದಿಂದಲೇ ಚರಿತ್ರಾಗೆ ರಂಗಭೂಮಿಯ ನಂಟು ಇತ್ತು. ಹಲವಾರು ಬೀದಿ ನಾಟಕಗಳಲ್ಲವರು ಎಳವೆಯಿಂದಲೇ ಅಭಿನಯಿಸುತ್ತಾ ಬಂದಿದ್ದರು. ಈ ಎಲ್ಲ ಅನುಭವಗಳನ್ನು ಒಟ್ಟುಗೂಡಿಸಿಕೊಂಡು ‘ಇಂಟರ್ವಲ್’ ಚಿತ್ರದ ನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
View this post on Instagram
ರಾಮನಗರದ ಹಾರೋಹಳ್ಳಿ ಮೂಲಕ ಚರಿತ್ರಾ ಬಹುಮುಖ ಪ್ರತಿಭೆ. ನಿರ್ದೇಶಕ ಭರತ್ ವರ್ಷ ಮತ್ತು ಕಥೆಗಾರ ಸುಕಿ ಈ ಸಿನಿಮಾದ ಪಾತ್ರಗಳಿಗೆ ಆಡಿಷನ್ ನಡೆಸಿ, ಅದಕ್ಕೆ ಸರಿ ಹೊಂದುವ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಎಲ್ಲವೂ ರೆಡಿಯಾದರೂ ಕೂಡಾ ಚಿತ್ರೀಕರಣದ ಕಡೇ ಘಳಿಗೆಯವರೆಗೂ ನಾಯಕಿ ಪಾತ್ರವೊಂದಕ್ಕೆ ಕಲಾವಿದೆಯ ಆಯ್ಕೆ ಕಾರ್ಯ ನಡೆದಿರಲಿಲ್ಲ. ಕಡೇ ಕ್ಷಣದಲ್ಲಿ ಆಡಿಷನ್ ಮೂಲಕವೇ ಚರಿತ್ರಾಗೆ ಆ ಅವಕಾಶ ಒಲಿದು ಬಂದಿದೆ. ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಖಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್ ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಕಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಕಿ ನಿಭಾಯಿಸಿದ್ದಾರೆ. ಇದೀಗ ‘ಇಂಟರ್ವಲ್’ನ ಯಶದ ಯಾನ ಇಪ್ಪತೈದರಾಚೆ ಹೊರಳಿಕೊಂಡಿದೆ.