ಹಾವೇರಿ: ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ನಾಳೆ(ಸೋಮವಾರ) ಪ್ರಕಟಗೊಳ್ಳಲಿದೆ.
ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿರೋ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗೆ ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ ಅಭ್ಯರ್ಥಿಗಳು ಅಥವಾ ಅವರ ಏಜೆಂಟ್ ರ ಸಮ್ಮುಖದಲ್ಲಿ ಕೊಠಡಿ ಓಪನ್ ಮಾಡಿ ಮತ ಎಣಿಕೆ ಕಾರ್ಯ ನಡೆಯಲಿದೆ. ಆರಂಭದಲ್ಲಿ ಅಂಚೆ ಮತಗಳನ್ನ ಎಣಿಕೆ ಮಾಡಲಿದ್ದು, ನಂತರದಲ್ಲಿ ಇವಿಎಂಗಳಲ್ಲಿನ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮತ ಎಣಿಕೆಗೆ ಸಕಲ ಸಿದ್ಧತೆ – ಕೆಆರ್‌ಪೇಟೆಯಲ್ಲಿ 144 ಸೆಕ್ಷನ್ ಜಾರಿ
ಹಿರೇಕೆರೂರು ಕ್ಷೇತ್ರದ ಮತ ಎಣಿಕೆ 17 ರೌಂಡ್ಸ್ ಗಳಲ್ಲಿ ಮತ್ತು ರಾಣೆಬೆನ್ನೂರು ಕ್ಷೇತ್ರದ ಮತ ಎಣಿಕೆ 19 ರೌಂಡ್ಸ್ ಗಳಲ್ಲಿ ನಡೆಯಲಿದೆ. ಮತ ಎಣಿಕೆಗೆ ಪ್ರತಿ ಕೊಠಡಿಯಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಯಾರಿಗೆ ಗೆಲುವು ಅನ್ನೋದು ಸ್ಪಷ್ಟವಾಗಲಿದೆ.