ಬೆಂಗಳೂರು: ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನಿ ಗೌಡ ಶರಣಾಗಿದ್ದು ಪೊಲೀಸರು ಬಂಧಿಸಿದ್ದಾರೆ.
ಈಗ ಸುದ್ದಿಯಲ್ಲಿರುವ ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದರೂ ಈ ಹಿಂದೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ.
Advertisement
ಮೊದಲು ನಟಿಯಾಗಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಅಶ್ವಿನಿ ಈಗ ಪೋಷಕ ನಟಿ ಪಾತ್ರದಲ್ಲಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸಿದ ‘ರಾಜಾಹುಲಿ’ ಚಿತ್ರದಲ್ಲಿ ಅಶ್ವಿನಿ ಯಶ್ ಅವರ ಅತ್ತೆ ಮಗಳ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು.
Advertisement
Advertisement
ಅಶ್ವಿನಿ ‘ವಾರಸ್ದಾರ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿ ಅಶ್ವಿನಿ ನಟ ಜೆಕೆ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅಶ್ವಿನಿ ಅವರು ಟಿ.ಎನ್ ಸೀತಾರಾಂ ಅವರ ‘ಮಹಾಪರ್ವ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
Advertisement
ಇದುವರೆಗೂ ಅಶ್ವಿನಿ ಗೌಡ 45 ಚಿತ್ರಗಳಲ್ಲಿ ಹಾಗೂ 15 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಷ್ಟು ದಿನ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಅಶ್ವಿನಿ ಈಗ ಕರವೇ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಏನಿದು ಪ್ರಕರಣ?
ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಲು ಅಶ್ವಿನಿ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಆಗ ಕರವೇ ಕಾರ್ಯಕರ್ತರು ವೈದ್ಯರ ವಾಗ್ವಾದ ಇಂಗ್ಲಿಷ್, ಕನ್ನಡ ಹೋರಾಟದ ರೂಪ ಪಡೆದಿತ್ತು. ಅಲ್ಲದೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಮಿಂಟೋ ಆಸ್ಪತ್ರೆ ಸಿಬ್ಬಂದಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಕರವೇ ಕಾರ್ಯಕರ್ತರು ಶರಣಾಗಿದ್ದು ವಿವಿ ಪುರಂ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈ ವಿಚಾರವಾಗಿ ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಯ ಒಪಿಡಿಗಳನ್ನು ಬಂದ್ ಮಾಡಿ ವೈದ್ಯರು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ತಡರಾತ್ರಿ ಸಭೆ ನಡೆಸಿ ಅಶ್ವಿನಿ ಗೌಡ ಸೇರಿದಂತೆ 12 ಜನ ಕಾರ್ಯಕರ್ತರು ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ದಕ್ಷಿಣ ಡಿಸಿಪಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗುವ ಬಗ್ಗೆ ತೀರ್ಮಾನ ಮಾಡಿದ್ದರು.
ಅದರಂತೆ ಇಂದು ಬೆಳಗ್ಗೆ ವಿವಿಪುರಂ ಪೊಲೀಸ್ ಠಾಣೆಗೆ ಬಂದ ಅಶ್ವಿನಿ ಗೌಡ ಮಧುಸೂದನ್ ಯಾದವ್, ಮನು, ಗಾಯಿತ್ರಿ, ಸಂಗೀತಾ ಶೆಟ್ಟಿ ಸೇರಿದಂತೆ 12 ಕಾರ್ಯಕರ್ತರು ಶರಣಾಗಿದ್ದಾರೆ. ಈ ಬಗ್ಗೆ ಬೆಳಗ್ಗೆ ಮಾತನಾಡಿದ್ದ ನಾರಾಯಣಗೌಡ ಹಾಗೂ ಹಲ್ಲೆ ಆರೋಪಿ ಅಶ್ವಿನಿಗೌಡ, ವೈದ್ಯರಿಗೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ಜನರಿಗೆ ತೊಂದರೆಯಾಗಬಾರದೆಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.